ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಕಳೆದ ನವೆಂಬರ್ 5 ರಂದು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನವಂಬರ್ 21 ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ. ಎನ್. ವಿ. ರಮಣ, ನ್ಯಾ. ಅಜಯ್ ರಾಷ್ಟ್ರೋಗಿ ಹಾಗೂ ನ್ಯಾ. ವಿ.ರಾಮಸುಬ್ರಹ್ಮಣಿಯನ್ ತ್ರಿಸದಸ್ಯ ಪೀಠ ಜಾಮೀನು ಅರ್ಜಿಯನ್ನು ಇಂದಿಗೆ ಮುಂದೂಡಿಕೆ ಮಾಡಿತ್ತು. ಇಂದು ಮತ್ತೆ ವಿಚಾರಣೆ ಕೈಗೊಂಡ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣ ಹಿನ್ನೆಲೆ
ಕಳೆದ ವರ್ಷ ಡಿ. 14 ರಂದು ನಡೆದ ದಾರುಣ ಘಟನೆಯಲ್ಲಿ 17 ಮಂದಿ ಮೃತಪಟ್ಟು ನೂರಾರು ಮಂದಿ ಅಸ್ವಸ್ಥರಾಗಿದ್ದರು. ದ್ವೇಷ, ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಸಾದಕ್ಕೆ ವಿಷ ಬೆರೆಸಿದ ನಾಲ್ವರು ಆರೋಪಿಗಳಲ್ಲಿ ಇಮ್ಮಡಿ ಮೊದಲನೇ ಆರೋಪಿಯಾಗಿದ್ದಾರೆ. ಇನ್ನು, ಸುಪ್ರೀಂನಲ್ಲಿ ಆರೋಪಿ ಪರವಾಗಿ ದುವಾ ಅಸೋಸಿಏಟ್ಸ್ ವಾದ ಮಂಡಿಸಿತ್ತು.