ಚಾಮರಾಜನಗರ : ರಾಜ್ಯವಷ್ಟೇ ಅಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತದ ಸಂಬಂಧ ವಿಚಾರಣೆ ತಡವಾಗುತ್ತಿದೆ ಎಂದು ಆರೋಪಿಗಳ ಪರ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ವಕೀಲ ಪ್ರವೀಣ್ ಮಾತನಾಡಿ, ವಿಚಾರಣೆ ತುಂಬಾ ತಡವಾಗಿ ಆಗುತ್ತಿದೆ. ಸರ್ಕಾರದ ಪರ ವಕೀಲರ ಸಾಕ್ಷಿಗಳು ಬರುತ್ತಿಲ್ಲ. ಕಳೆದ ಐದು ತಿಂಗಳಿನಿಂದ ಕೇಸ್ ಇದ್ದಲ್ಲಿಯೇ ಇದ್ದು, ವಿಚಾರಣೆ ಮುಂದೂಡಲಾಗುತ್ತಿದೆ. ಈಗ ಮುಂದಿನ ತಿಂಗಳು 11ಕ್ಕೆ ಕೇಸ್ ಮುಂದೂಡಲಾಗಿದೆ ಎಂದರು.
ಇದನ್ನೂ ಓದಿ: ಮಂಗಳೂರಿನ ಕಾವೇರಿ ಎಂಪೋರಿಯಂ ಮಳಿಗೆಗೆ ರೂಪಾ ಮೌದ್ಗಿಲ್ ಭೇಟಿ
ಪ್ರಾಸಿಕ್ಯೂಷನ್ನ ಸಾಕ್ಷಿಗಳು ಯಾರೂ ಸ್ಪಂದಿಸುತ್ತಿಲ್ಲ, ಹೇಳಿ ಕಳುಹಿಸಿದರೂ ಅವರ್ಯಾರು ಕೋರ್ಟ್‌ಗೆ ಬರುತ್ತಿಲ್ಲವಾದ್ದರಿಂದ ನಮ್ಮ ಕಕ್ಷಿದಾರರನ್ನು ಕೇಳಿಕೊಂಡು ಹೈಕೋರ್ಟ್‌ಗೆ ಹೋಗಲು ಚಿಂತನೆ ನಡೆಸಲಾಗಿದೆ ಎಂದರು.
ಈ ಸಂಬಂಧ ಈಟಿವಿ ಭಾರತಕ್ಕೆ ಪ್ರಕರಣದ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ ಪ್ರತಿಕ್ರಿಯಿಸಿ, ವಿಚಾರಣೆ ತಡವಾಗೇನೂ ಆಗುತ್ತಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾದ್ದರಿಂದ ಸಾಕ್ಷಿಗಳನ್ನು ಸಂಪೂರ್ಣವಾಗಿ ವಿಚಾರಣೆ ಮಾಡಬೇಕಾಗುತ್ತದೆ.
ಈಗಾಗಲೇ ಐವರು ಸಾಕ್ಷಿಗಳ ಸಂಪೂರ್ಣ ವಿಚಾರಣೆ ಆಗಿದೆ. ಇನ್ನೊಂದು ಸಾಕ್ಷಿಯ ವಿಚಾರಣೆ ಅರ್ಧವಾಗಿದೆ. ಪ್ರಕರಣ ಶೀಘ್ರ ಇತ್ಯರ್ಥವಾಗಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.
ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಗಳು : ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಭದ್ರತೆ ದೃಷ್ಟಿಯಿಂದ ಪ್ರಕರಣದ ಆರಂಭದಿಂದಲೂ ಇವರನ್ನು ಮೈಸೂರಿನ ಕಾರಾಗೃಹದಲ್ಲೇ ಇಡಲಾಗಿದೆ.