ಚಾಮರಾಜನಗರ: ಕೃಷಿ ಸಾಲ ವಸೂಲಾತಿಗಾಗಿ ರೈತರ ಮನೆಗಳಿಗೆ ಹೋಗಿ ಸಾಲದ ಬಾಬ್ತು ಹಣ ಕಟ್ಟುವಂತೆ ಒತ್ತಾಯಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಕ್ರಮ ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಸಿಂಡಿಕೇಟ್ ಬ್ಯಾಂಕ್ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಗರದಲ್ಲಿ ನಡೆಯಿತು.
ರೈತರ ಮನೆ ಬಾಗಿಲಿಗೆ ತೆರಳಿ ಬಲವಂತವಾಗಿ ಕೃಷಿ ಸಾಲ ವಸೂಲಾತಿಗಾಗಿ ಇಳಿದಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸಾಲ ಕಟ್ಟದಿದ್ದರೇ ಜೈಲಿಗೆ ಕಳುಹಿಸುವುದಾಗಿ, ನ್ಯಾಯಾಲಯದಲ್ಲಿ ಕೇಸು ದಾಖಲಿಸುವುದಾಗಿ ಮತ್ತು ಕೃಷಿ ಜಮೀನಿನನ್ನ ಹರಾಜು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ಅದು ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ರೈತರ ಮನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಬಂದಲ್ಲಿ ಬಾರುಕೋಲು ಚಳವಳಿ, ಅಧಿಕಾರಿಗಳನ್ನು ಕಟ್ಟಿ ಹಾಕುತ್ತೇವೆ. ಮತ್ತು ಅಧಿಕಾರಿಗಳ ವಾಹನಗಳನ್ನು ಸುಟ್ಟು ಹಾಕುತ್ತೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಭಾಗ್ಯರಾಜ್ ಎಚ್ಚರಿಕೆ ರವಾನಿಸಿದ್ದಾರೆ.