ಚಾಮರಾಜನಗರ: ಕಬ್ಬಿನ ದರ ನಿಗದಿ ಮಾಡದೇ, ರೈತಸಂಘದ ಜೊತೆ ಚರ್ಚಿಸುವ ವ್ಯವಧಾನವೂ ಈ ಸರ್ಕಾರಕ್ಕಿಲ್ಲ. ರೈತರ ಹೋರಾಟವನ್ನು ಪೊಲೀಸರ ಮೂಲಕ ಸರ್ಕಾರ ಹತ್ತಿಕ್ಕಿದೆ. ಅಕ್ಟೋಬರ್ 5ರ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸೋಮಣ್ಣ ಹೇಳಿದ್ದು, ಸಮಸ್ಯೆ ಪರಿಹಾರ ನೀಡದಿದ್ದಲ್ಲಿ ಮುಂದಿನ ಹೋರಾಟಕ್ಕೆ ರೂಪುರೇಷೆ ನಡೆಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ವರಿಸಿದ್ದಾರೆ.
ನಗರದಲ್ಲಿ 'ಈಟಿವಿ ಭಾರತ' ಜೊತೆ ಅವರು ಮಾತನಾಡಿ, ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದಲ್ಲಿ ಒಂದು ಟನ್ ಕಬ್ಬಿಗೆ 3,500 ರೂ. ಕೊಡುತ್ತಿದ್ದಾರೆ, ಗುಜರಾತ್ ನಲ್ಲಿ 4,400 ರೂ. ಇದೆ. ಆದರೆ ಕರ್ನಾಟಕದಲ್ಲೂ 3500 ರೂ.ಕೊಡಿ ಎಂದು ಕೇಳಿದರೇ ರೈತಪರ ಸರ್ಕಾರ ಎಂದುಕೊಳ್ಳುವ ಇವರು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಾರೆ. ಇದೇ ರೀತಿ ಮುಂದುವರೆದರೇ ಪೊಲೀಸರ ವಿರುದ್ಧ ಬಾರುಕೋಲು, ಸಗಣಿ, ಪೊರಕೆ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರಿದ್ದಾರೆ, 40 ಲಕ್ಷ ಪಂಪ್ ಸೆಟ್ ಬಳಸುವ ಕೃಷಿಕರಿದ್ದಾರೆ. ನಮಗೆ ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಇಲ್ಲದಿದ್ದಲ್ಲಿ ಒಂದು ಪಕ್ಷವನ್ನು ಸೋಲಿಸುವ ಶಕ್ತಿ ಅಂತೂ ರೈತರಿಗಿದೆ ಎಂದು ಗುಡುಗಿದ್ದಾರೆ. ಇದೇ ವೇಳೆ, ಕೆಲವರು ರಿಯಲ್ ಎಸ್ಟೇಟ್ ಕುಳಗಳು, ಉದ್ಯಮಿಗಳು ಹಸಿರು ಶಾಲು ಹೊದ್ದು ರೈತರಿಗೆ ಮೋಸ ಮಾಡುತ್ತಿದ್ದಾರೆ, ಇಂಥವರ ಬಗ್ಗೆ ಎಚ್ಚರ ಇರಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಇದನ್ನೂ ಓದಿ : ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ.. ಬಾಂಧವ್ಯ ಹೆಚ್ಚಿಸಲು ಹಿರಿಯ ಕಾಂಗ್ರೆಸಿಗರ ಪ್ರಯತ್ನ