ಚಾಮರಾಜನಗರ: ಎಸ್ಎಸ್ಎಲ್ಸಿ ಮಕ್ಕಳಲ್ಲಿ ಯಾವುದೇ ರೀತಿಯ ಕೊರೊನಾ ಆತಂಕವಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊಳ್ಳೇಗಾಲದ ಸತ್ತೇಗಾಲದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಎಸ್. ಸುರೇಶ್ ಕುಮಾರ್, ನಾನು ಮಕ್ಕಳಲ್ಲಿ ಕೊರೊನಾ ಕುರಿತು ಯಾವುದೇ ಭಯ ಕಂಡಿಲ್ಲ. 1-6 ತನಕ ಪರೀಕ್ಷೆ ಬರೆಸದೆ ಉತ್ತೀರ್ಣ ಮಾಡಿರುವಂತೆ ಎಸ್ಎಸ್ಎಲ್ಸಿಯನ್ನೂ ಅದೇ ರೀತಿ ಮಾಡಬಹುದಾ? ಎಂದು ಕೇಳಿದೆ. ಅದಕ್ಕವರು, ದಯವಿಟ್ಟು ಬೇಡ ಸರ್, ನಾವು ಓದಿದ್ದೀವಿ ಪರೀಕ್ಷೆ ಬರೆಯುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಆತಂಕ ಇಲ್ಲದೇ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಇಲಾಖೆಯು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪರೀಕ್ಷಾ ಕೊಠಡಿಯಲ್ಲಿ ಕಡಿಮೆ ಮಕ್ಕಳನ್ನು ಕೂರಿಸಬೇಕು, ಅಂತರವಿರಬೇಕು, ಶಾಲೆಯಲ್ಲಿ ಸ್ಯಾನಿಟೇಷನ್, ಸೋಪ್ ಇರಬೇಕು, ಪರೀಕ್ಷೆ ಬಿಟ್ಟ ಬಳಿಕ ಗುಂಪು ಗುಂಪಾಗಿ ವಿದ್ಯಾರ್ಥಿಗಳನ್ನು ಕಳುಹಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ಹಿಂದೆ ಮಕ್ಕಳೊಂದಿಗೆ ಸಂವಾದ ಮಾಡುತ್ತಿದ್ದೆ, ಪರೀಕ್ಷೆ ಹತ್ತಿರ ಬಂದಿರುವುದರಿಂದ ಮಕ್ಕಳೊಟ್ಟಿಗೆ ಆಪ್ತ ಸಮಾಲೋಚನೆ ಮಾಡುತ್ತಿದ್ದೇನೆ. ಬಹುತೇಕ ಪಾಲಕರು ಶಿಕ್ಷಿತರಲ್ಲದ ಕಾರಣ ಮಕ್ಕಳಿಗೆ ಮಾರ್ಗದರ್ಶನ ಮಾಡಲಾರರು. ಹಾಗಾಗಿ ಅವರೊಟ್ಟಿಗೆ ಮಾತನಾಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ, ಪರೀಕ್ಷಾ ತಯಾರಿ ಕುರಿತು ವಿಚಾರಿಸುತ್ತಿದ್ದೇನೆ ಎಂದರು.