ಚಾಮರಾಜನಗರ: ಜಿಲ್ಲೆಯ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಶಾಲಾ ಸಂಸತ್ತಿನ ಭಾಗವಾಗಲು ಮಕ್ಕಳು ಉತ್ಸಾಹ ತೋರುತ್ತಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯ, ಮತದಾನದ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಸಲುವಾಗಿ ಶಾಲಾ ಸಂಸತ್ ಎಂಬ ಮಂತ್ರಿಮಂಡಲ ಚುನಾವಣೆ ನಡೆಸಲಾಗುತ್ತಿದ್ದು, ಥೇಟ್ ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಚುನಾವಣೆಯೂ ನಡೆಯುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಸೋಮಳ್ಳಿ ಗ್ರಾಮದ ಶ್ರೀ ಗಂಗಾಧರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಪ್ರಚಾರ ಮಾಡಿ, ಬ್ಯಾಲೆಟ್ ಪೇಪರ್ಗಳಲ್ಲಿ ಮತದಾನ ಮಾಡಿದರು. ವಿದ್ಯಾರ್ಥಿಗಳ ಬೆರಳಿಗೆ ಶಾಹಿ ಗುರುತು ಹಾಕಲಾಯಿತು. ಕಬ್ಬಹಳ್ಳಿ ಶಾಲೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಪಕ್ಷಗಳನ್ನು ಮಾಡಿಕೊಂಡು ಚುನಾವಣೆ ಭದ್ರತೆಗಾಗಿ ವಿದ್ಯಾರ್ಥಿಯೊಬ್ಬನಿಗೆ ಪೊಲೀಸ್ ವೇಷಭೂಷಣ ತೊಡಿಸಿ ಸಾರ್ವತ್ರಿಕ ಚುನಾವಣೆ ಮರುಸೃಷ್ಟಿ ಮಾಡಿದ್ದಾರೆ.
ಹೀಗಿದೆ ಮಂತ್ರಿಮಂಡಲ: ಸೋಮಹಳ್ಳಿ ಶಾಲೆಯ ಚುನಾವಣೆ ಮೇಲುಸ್ತುವಾರಿ ಹೊತ್ತಿದ್ದ ಮಧು ಮಾಹಿತಿ ನೀಡಿ, 'ಮತಗಟ್ಟೆ, ಬ್ಯಾಲೆಟ್ ಪೇಪರ್, ಬೆರಳಿಗೆ ಶಾಹಿ ಎಲ್ಲವನ್ನೂ ಶಾಲಾ ಚುನಾವಣೆಯಲ್ಲಿ ಬಳಸಲಾಗಿದೆ. ಮಂತ್ರಿ ಮಂಡಲದ ಮೇಲುಸ್ತುವಾರಿಗಾಗಿ ಮುಖ್ಯಮಂತ್ರಿಯಾಗಿ ಓರ್ವ ವಿದ್ಯಾರ್ಥಿ ಆಯ್ಕೆಯಾಗಲಿದ್ದು, ಪ್ರೇಯರ್ ಕಮಾಂಡಿಗ್ ನೀಡಲು ಪ್ರಾರ್ಥನ ಮಂತ್ರಿ, ಬಿಸಿಯೂದ ದೂರು ನೀಡಲು ಹಾಗು ಮೆನು ಪ್ರಕಾರ ಅಡಿಗೆ ಮಾಡಿರುವುದನ್ನು ಗಮನ ಹರಿಸಲು ಆಹಾರ ಮಂತ್ರಿ, ಸ್ವಚ್ಛತೆ ಮತ್ತು ಗೆಳೆಯರ ಅನಾರೋಗ್ಯದ ಬಗ್ಗೆ ಮಾಹಿತಿಗಾಗಿ ಆರೋಗ್ಯ ಮಂತ್ರಿ, ಶಾಲಾ ಕೊಠಡಿಗಳಿಗೆ ಬೀಗ ಹಾಕಿಸಲು ಗೃಹ ಮಂತ್ರಿ, ಪ್ರವಾಸಕ್ಕಾಗಿ ಹಣ ಸಂಗ್ರಹ, ವಿವಿಧ ಪೂಜೆಗಾಗಿ ಹಣ ಸಂಗ್ರಹ, ಶಾಲಾ ಫೀ ಬಗ್ಗೆ ಮಾಹಿತಿ ಕೊಡಲು ಹಣಕಾಸು ಮಂತ್ರಿ, ಗ್ರೂಪ್ ಸ್ಟಡಿ ಮಾಡಿಸಲು ಶಿಕ್ಷಣ ಮಂತ್ರಿ, ಕುಡಿಯುವ ನೀರು, ಶೌಚಾಲಯ ಸ್ವಚ್ಛತೆ ಬಗ್ಗೆ ಗಮನ ಹರಿಸಲು ನೀರಾವರಿ ಮಂತ್ರಿ ಹೀಗೆ ತೋಟಗಾರಿಕೆ, ಗ್ರಂಥಾಲಯ ಮಂತ್ರಿಗಳನ್ನು ಮತದಾನದ ಮೂಲಕ ನೇಮಕ ಮಾಡಲಾಗುತ್ತದೆ' ಎಂದು ತಿಳಿಸಿದರು.
ಒಂದು ವರ್ಷದ ಅಧಿಕಾರ: ಕಬ್ಬಹಳ್ಳಿ ಶಾಲೆಯ ಶಿಕ್ಷಕ ವೆಂಕಟರಮಣಸ್ವಾಮಿ ಶಾಲಾ ಚುನಾವಣೆ ಬಗ್ಗೆ ಮಾಹಿತಿ ನೀಡಿ, 'ಶಾಲಾ ಸಂರಕ್ಷಣಾ ಪಕ್ಷ ಹಾಗೂ ಶಾಲಾ ಹಿತಕಾಯುವ ಪಕ್ಷಗಳ ನಡುವೆ ಚುನಾವಣೆ ನಡೆದು ಹೆಚ್ಚು ಮತ ಪಡೆದ ವಿದ್ಯಾರ್ಥಿಗಳು ಮಂತ್ರಿಗಳಾಗಿದ್ದಾರೆ. ವಿದ್ಯಾರ್ಥಿಗಳು 10 ರೂ. ಠೇವಣಿ ಇಟ್ಟು ಚುನಾವಣೆಗೆ ನಿಂತಿದ್ದರು ಎಂದು ತಿಳಿಸಿದರು.
ಒಟ್ಟಿನಲ್ಲಿ ಮಕ್ಕಳು ಮಂತ್ರಿಗಳಾಗುತ್ತಿದ್ದು, ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಚುನಾವಣೆ ರಂಗೇರಿದೆ. ಮಕ್ಕಳ ಈ ಚುನಾವಣೆ ಹಿರಿಯರಿಗೂ ಮಾದರಿಯಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ.. ದ್ವಿತೀಯ ಪಿಯು ಪ್ರವೇಶ ದಾಖಲಾತಿ ದಿನಾಂಕ ವಿಸ್ತರಣೆ