ಕೊಳ್ಳೇಗಾಲ(ಚಾಮರಾಜನಗರ): ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ 1 ವರ್ಷ ತುಂಬಿದೆ. ಅದರಂತೆ ನ. 26 ರಂದು ರಾಜ್ಯದ 15 ಕಡೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಡಗಲಪುರ ನಾಗೇಂದ್ರ (Badagalapura Nagendra) ಹೇಳಿದರು.
ನಗರದ ಕಾರ್ಯನಿತರ ಪತ್ರಕರ್ತರ ಸಂಘದ ಕಛೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಸಂಯುಕ್ತ ಹೋರಾಟ ಕರ್ನಾಟಕದಡಿಯಲ್ಲಿ 42 ಸಂಘಟನೆಗಳು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ರಾಜ್ಯಾದ್ಯಂತ 15 ಕಡೆಗಳಲ್ಲಿ ಹೆದ್ದಾರಿ ತಡೆಯುವ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ನಾವು ಚಳವಳಿ ಗೆದ್ದರೆ ದೇಶ ಗೆಲ್ಲುತ್ತೆ ಅಂತ ತಿಳಿದಿದ್ದೇವೆ. ಕಾಯ್ದೆ ಹಿಂಪಪಡೆಯುವ ತನಕ ಹೋರಾಟ ನಡೆಯುತ್ತಲೆ ಇದ್ದು, ಈ ದಿಟ್ಟ ನಿರ್ಧಾರದ ಮೇಲೆ ಹೋರಾಟಕ್ಕಿಳಿದಿದ್ದೇವೆ. ನ.26 ರ ಬೆಳಿಗ್ಗೆ ನಿಂದಲೂ ಸಂಜೆವರೆಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತದೆ. ಕೃಷಿಗೆ ಪೂರಕವಾದ ಪ್ರಾಣಿಗಳು ಹಾಗೂ ವಾಹನಗಳನ್ನು ಬೀದಿಗೆ ಇಳಿಸಿ ಹೋರಾಟ ನಡೆಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ರು.
ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಕಡೆ ಪ್ರತಿಭಟನೆ ನಡೆಯಲಿದೆ. ಗುಂಡ್ಲುಪೇಟೆಯ ಮೈಸೂರು-ಊಟಿ ರಸ್ತೆ ಹೆದ್ದಾರಿ ಮತ್ತು ಕೊಳ್ಳೇಗಾಲದ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಹೆದ್ದಾರಿ ರಸ್ತೆ ತಡೆದು ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಳೆ ಪರಿಹಾರಕ್ಕೆ ಆಗ್ರಹ:
ರಾಜ್ಯದಲ್ಲಿ ನಿರಂತರವಾಗಿ ಬಿಟ್ಟು ಬಿಡದೆ ಮಳೆಯಾಗುತ್ತಿರುವ ಪರಿಣಾಮ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಈಗಾಗಲೆ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಇದೀಗ ರಾಜ್ಯಾದ್ಯಂತ ಅಧಿಕ ಮಳೆಯಿಂದಾಗಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಅಡಿಕೆ, ಟಮೆಟೊ ಇನ್ನಿತರ ತರಕಾರಿ ಬೆಳೆಗಳು ರೈತನ ಕೈ ಸೇರುವಷ್ಟರಲ್ಲಿ ನೆಲಕಚ್ಚಿದೆ.
ಈ ಬಗ್ಗೆ ಸರ್ಕಾರ ಇದುವರೆಗೂ ಚಕಾರವೆತ್ತಿಲ್ಲ. ಅತಿವೃಷ್ಠಿಯಾಗಲಿ, ಅನಾವೃಷ್ಠಿಯಾಗಲಿ ಹಾಗೂ ಇನ್ನಿತರ ಪ್ರಕೃತಿ ವಿಕೋಪದಿಂದಾಗಲಿ ಬೆಳೆ ನಾಶವಾದರೆ ಸರ್ಕಾರ ಸ್ಪಂದಿಸಬೇಕು. ಆದರೆ ಸರ್ಕಾರ ಮಾಡಿಲ್ಲ. ಈ ಕೂಡಲೇ ಸಮರೋಪದಿಯಲ್ಲಿ ವೈಜ್ಞಾನಿಕ ಪರಿಹಾರ ನೀಡಬೇಕು. ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.