ಚಾಮರಾಜನಗರ: ಭಾನುವಾರ ರಾತ್ರಿ ಸುರಿದ ನಿರಂತರ ಮಳೆಗೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ರಾಡಿಯಾಗಿದ್ದು, ಸಿಂಥೆಟಿಕ್ ಟ್ರ್ಯಾಕ್ಗೆ ಹೋಗುವ ದಾರಿ ಕೆಸರುಮಯವಾಗಿದೆ. ಇದರಿಂದ ಕೋಪಗೊಂಡಿರುವ 50 ಕ್ಕೂ ಹೆಚ್ಚು ಕ್ರೀಡಾಭ್ಯಾಸಿಗಳು ಸಿಂಥೆಟಿಕ್ ಟ್ರ್ಯಾಕ್ ಸಮೀಪ ನಾಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಮೂರು ನಾಲ್ಕು ವರ್ಷದಿಂದಲೂ ಸಿಂಥಟಿಕ್ ಟ್ರ್ಯಾಕ್ ಸಮೀಪ ರಸ್ತೆ ನಿರ್ಮಿಸಿ, ಕ್ರೀಡಾಂಗಣದಲ್ಲಿ ನೀರು ನಿಂತು ಕೆಸರಾಗುವುದನ್ನು ತಪ್ಪಿಸಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗದೇ ಇಂದು ಕ್ರೀಡಾಂಗಣಕ್ಕೆ ತೆರಳಲು ಕ್ರೀಡಾಭ್ಯಾಸಿಗಳು ಪರದಾಡಿದ್ದಾರೆ. ವಿಪರ್ಯಾಸವೆಂದರೆ ಕಳೆದ 20 ವರ್ಷಗಳಿಂದಲೂ ಈ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಅದೂ ಕೂಡ ಅವೈಜ್ಞಾನಿಕವಾಗಿದೆ ಎನ್ನುತ್ತಾರೆ ಸ್ಥಳೀಯರು.
ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಬರಿಗಾಲಲ್ಲೇ ನಡೆಯಬಾರದು ಎನ್ನುತ್ತಾರೆ. ಅದರಲ್ಲಿ ಕೆಸರು, ಮಣ್ಣು ತುಂಬಿ ಕಾಲು ಹಾಕಲು ಸಾಧ್ಯವಿಲ್ಲದಂತಾಗಿದೆ. ಕ್ರೀಡಾಂಗಣದಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲು ಕ್ರೀಡಾ ಇಲಾಖೆ ವಿಫಲವಾಗಿದೆ. ಮಿನಿ ಒಲಿಂಪಿಕ್ನಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಪದಕ ಪಡೆದಿದ್ದಾರೆ. ಸೌಲಭ್ಯವೇ ಕೊಡದಿದ್ದರೆ ಮಕ್ಕಳು ಹೇಗೆ ಆಟ ಆಡುತ್ತಾರೆ, ಪದಕ ಗೆಲ್ಲುತ್ತಾರೆ ಎಂದು ಕ್ರೀಡಾಭ್ಯಾಸಿಗಳ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಗಾಳಿ-ಮಳೆ ರಭಸಕ್ಕೆ ಬಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಎರಡು ಗ್ಯಾಲರಿ!