ಚಾಮರಾಜನಗರ : ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಸುಸೂತ್ರವಾಗಿ ನಡೆದಿದೆ. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್, ಬುರ್ಕಾ ತೆರೆದಿಟ್ಟು ಪರೀಕ್ಷೆಗೆ ಹಾಜರಾದರು. ನಗರದ ಬಾಲಕರ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಧರಿಸಿ ನಾಲ್ವರು ವಿದ್ಯಾರ್ಥಿನಿಯರು ಬಂದಿದ್ದರು.
ಆಗ ಶಿಕ್ಷಕರು ಕೇಂದ್ರದೊಳಗಡೆ ಹಿಜಾಬ್ ಬೇಡ. ಪರೀಕ್ಷೆ ಬಳಿಕ ಹಿಜಾಬ್ ಧರಿಸಿಕೊಳ್ಳಿ ಎಂದು ಮನವೊಲಿಸಿದರು. ಅದರಂತೆ, ವಿದ್ಯಾರ್ಥಿನಿಯರು ಹಿಜಾಬ್ ತೆರೆದಿಟ್ಟು ಪರೀಕ್ಷೆ ಬರೆಯಲು ಆರಂಭಿಸಿದರು. ಇತರ ಕೆಲ ಕಡೆಗಳಲ್ಲಿ ವಿದ್ಯಾರ್ಥಿನಿಯರು ಶಾಲಾ ಆವರಣದ ತನಕ ಹಿಜಾಬ್, ಬುರ್ಕಾ ಧರಿಸಿ ಬಂದರು. ನಂತರ ಸ್ವಯಂ ಪ್ರೇರಣೆಯಿಂದ ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಹಾಗೂ ಬುರ್ಕಾ ತೆರೆದಿಟ್ಟು ಶಾಲಾ ಸಮವಸ್ತ್ರದಲ್ಲಿ ಪರೀಕ್ಷೆಗೆ ಹಾಜರಾದರು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 12,271 ಮಂದಿ ಪರೀಕ್ಷಾರ್ಥಿಗಳಿದ್ದಾರೆ. ಕಾಯ್ದಿರಿಸಿದ 5 ಪರೀಕ್ಷಾ ಕೇಂದ್ರವನ್ನು ಸೇರಿದಂತೆ ಒಟ್ಟು 63 ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಚಾಮರಾಜನಗರ ತಾಲೂಕು-23, ಗುಂಡ್ಲುಪೇಟೆ-12, ಕೊಳ್ಳೇಗಾಲ-13, ಹನೂರು-10 ಹಾಗೂ ಯಳಂದೂರಿನಲ್ಲಿ 4 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಪರೀಕ್ಷಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೊರೊನಾ ಮಾರ್ಗಸೂಚಿಯಿಂದಾಗಿ ಕಳೆದ ಬಾರಿ ಒಂದು ಡೆಸ್ಕ್ನಲ್ಲಿ ಓರ್ವ ವಿದ್ಯಾರ್ಥಿಯನ್ನು ಕೂರಿಸಲಾಗುತ್ತಿತ್ತು. ಈ ಬಾರಿ ಒಂದು ಡೆಸ್ಕ್ಗೆ ಇಬ್ಬರು ವಿದ್ಯಾರ್ಥಿಗಳು ಕುಳಿತುಕೊಂಡಿದ್ದಾರೆ. ಖಾಸಗಿ ಹಾಗೂ ಪುನರಾವರ್ತಿತ ಪರೀಕ್ಷಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಒಂದು ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
229 ವಿದ್ಯಾರ್ಥಿಗಳು ಗೈರು: 225 ಮಂದಿ ಹೊಸ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಚಾಮರಾಜನಗರ ತಾಲೂಕೊಂದರಲ್ಲೇ 111 ಮಂದಿ, ಗುಂಡ್ಲುಪೇಟೆಯಲ್ಲಿ 42, ಹನೂರು 31, ಕೊಳ್ಳೇಗಾಲ 20, ಯಳಂದೂರಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಗೈರಾಗಿರಲು ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಜೀವಂತ ಇರುವ ಎಸ್ಎಸ್ಎಲ್ಸಿ ವಿದ್ಯಾರ್ಥಿ ಫೋಟೋಗೆ ತಿಥಿ ಕಾರ್ಯ: ಕಿಡಿಗೇಡಿಗಳ ಕೃತ್ಯದಿಂದ ಕುಟುಂಬಕ್ಕೆ ಆತಂಕ