ಚಾಮರಾಜನಗರ: ಬಹು ಚರ್ಚಿತ, ಇಂದಿಗೂ ಪರ-ವಿರೋಧದ ನಡುವೆಯೇ ಇರುವ SSLC ಪರೀಕ್ಷೆಗೆ ಚಾಮರಾಜನಗರ ಸಜ್ಜುಗೊಂಡಿದ್ದು ಹಲವು ಮುನ್ನೆಚ್ಚರಿಕಾ ಕ್ರಮಗಳ ನಡುವೆ ಗುರುವಾರ ವಿದ್ಯಾರ್ಥಿಗಳ ಕೈಯಲ್ಲಿ ಪರೀಕ್ಷೆ ಬರೆಸಲು ತಯಾರಾಗಿದೆ.
ಇದು ವಿದ್ಯಾರ್ಥಿಗಳಿಗೆ ಪಠ್ಯ ಪರೀಕ್ಷೆಯಾದರೆ ಜಿಲ್ಲಾಡಳಿತಕ್ಕೆ ಇದು ಸತ್ವಪರೀಕ್ಷೆಯೂ ಹೌದು. ಏಕೆಂದರೆ, ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ನಡುವೆ ವಿದ್ಯಾರ್ಥಿಗಳು ಮತ್ತು ಪಾಲಕರ ಆತಂಕವನ್ನು ದೂರ ಮಾಡಿ ನಿಶ್ಚಿಂತೆಯಿಂದ ಪರೀಕ್ಷೆ ಮುಗಿಸುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸ.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹೋಲಿಸಿದರೆ SSLC ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳುವ ಕೆಲಸ ತುಸು ತ್ರಾಸದಾಯಕ. ಹಾಗಾಗಿ, ಇವೆಲ್ಲದರ ನಡುವೆ ಈ ಬಾರಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಬೇಕಾದ್ದು ಜಿಲ್ಲಾಡಳಿತಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ಗಡಿಜಿಲ್ಲೆಯಲ್ಲಿ ಹೇಗಿದೆ ತಯಾರಿ:
ಈ ಬಾರಿ ಒಟ್ಟು 54 ಪರೀಕ್ಷಾ ಕೇಂದ್ರಗಳಿರಲಿದ್ದು ಹೊರ ರಾಜ್ಯದಲ್ಲಿ ಸಿಲುಕಿದ್ದ ನಾಲ್ವರು ಮತ್ತು ಹೊರ ಜಿಲ್ಲೆಗಳ 41 ಮಂದಿ ಸೇರಿದಂತೆ 11,839 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಇವರಲ್ಲಿ 10,806 ಹೊಸ ವಿದ್ಯಾರ್ಥಿಗಳು, 629 ಪುನಾರವರ್ತಿತ, 247 ಖಾಸಗಿ ಹಾಗೂ 81 ಮಂದಿ ವಿಶೇಷ ಚೇತನರಿದ್ದಾರೆ. ಪರೀಕ್ಷೆ 10.30ಕ್ಕೆ ಪ್ರಾರಂಭವಾಗಲಿದ್ದು 8.30ಕ್ಕೆ ವಿದ್ಯಾರ್ಥಿಗಳು ಹಾಜರಿರಬೇಕಿದೆ. ಸಿಬ್ಬಂದಿ 7.30 ಕ್ಕೆ ಬರಬೇಕಿದ್ದು ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್‌ಗಳನ್ನು ನೀಡಲಾಗುತ್ತದೆ. ಒಂದು ವೇಳೆ, ನೆಗಡಿ, ಕೆಮ್ಮು, ಜ್ವರದಿಂದ ಬಳಲುವ ವಿದ್ಯಾರ್ಥಿಗಳಿದ್ದರೆ ಅವರಿಗೆ N95 ಮಾಸ್ಕ್ ನೀಡಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆಯೂ ನಡೆದಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಖಾಸಗಿ ಶಾಲೆಗಳ 85 ಬಸ್‌ಗಳನ್ನು ಬಾಡಿಗೆ ಪಡೆಯಲಾಗಿದೆ. ಕಾಲ್ನಡಿಗೆಯಲ್ಲಿ ಬರುವವರು, ಸೈಕಲ್‌ನಲ್ಲಿ ಬರುವ ವಿದ್ಯಾರ್ಥಿಗಳನ್ನು ಈಗಾಗಲೇ ಶಿಕ್ಷಣ ಇಲಾಖೆ ಪಟ್ಟಿ ಮಾಡಿ ಯಾವ ವಿದ್ಯಾರ್ಥಿಯೂ ಪರೀಕ್ಷೆಗೆ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಆಗುತ್ತಿರುವ ಕುರಿತು ನಿಗಾ ಇಡಲು ತಾಲೂಕು ಮಟ್ಟದ 49 ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪರೀಕ್ಷಾ ಮೇಲ್ವಿಚಾರಣೆ ನಡೆಸಲು ಜಿ.ಪಂ.ಸಿಇಒ ಎಚ್.ಭೋಯರ್ ನೇತೃತ್ವದಲ್ಲಿ ಜಿಲ್ಲಾ ಕಣ್ಗಾವಲು ಸಮಿತಿ ರಚಿಸಲಾಗಿದೆ. ಎಸಿ ಹಾಗೂ ಎಎಸ್ಪಿ ಇದರ ಸದಸ್ಯರಾಗಿದ್ದಾರೆ. ಈಗಾಗಲೇ ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದ್ದು ಪರೀಕ್ಷಾ ಕೇಂದ್ರಗಳಿಗೆ ಮಾಸ್ಕ್‌ಗಳ ವಿಲೇವಾರಿಯೂ ಆಗಿದೆ.
ಇಲ್ಲಸಲ್ಲದ ವದಂತಿ ಹರಡುವವರು, ಸುಳ್ಳು ಮಾಹಿತಿ ನೀಡುವುದು, ಭಯ ಹುಟ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು 200 ಮೀಟರ್ ಸುತ್ತ ನಿಷೇಧಾಜ್ಞೆ, ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.