ಚಾಮರಾಜನಗರ: ಅಂತರಬೆಳೆಯಾಗಿ ಹಾಗೂ ಜಿಲ್ಲೆಯ ಹಲವೆಡೆ ಮುಖ್ಯ ಬೆಳೆಯಾಗಿ ಬೆಳೆಯುವ ತೊಗರಿಯ ಇಳುವರಿ ಹೆಚ್ಚಿಸಲು ಕೈ ಯಂತ್ರವೊಂದನ್ನು ಜಿಲ್ಲೆಯಲ್ಲಿ ಬಳಸಲಾಗುತ್ತಿದೆ.
ತೊಗರಿ ಮತ್ತು ನೆಲಗಡಲೆ ಗಿಡಗಳ ತುದಿ ಚಿವುಟುವುದರಿಂದ ಇಳುವರಿ ಹೆಚ್ಚಾಗಲಿದೆ. ಆದ್ರೆ ಕೂಲಿ ಕಾರ್ಮಿಕರ ಕೊರತೆ ಮತ್ತು ಕಾರ್ಮಿಕರಿಗೆ ಹೆಚ್ಚು ಹಣ ತೆರಬೇಕಾಗಿದ್ದು ಜಿಲ್ಲೆಯ ಯಾವೊಬ್ಬ ರೈತ ಕೂಡಾ ತುದಿ ಚಿವುಟಲು ಮುಂದಾಗುತ್ತಿಲ್ಲ. ಇದನ್ನು ಮನಗಂಡ ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರವು ಕಲಬುರಗಿಯಿಂದ ಸರಳ ಸಾಧನವನ್ನು ತರಿಸಿದೆ. ಇದರ ಮೂಲಕ ಒಂದು ದಿನದಲ್ಲಿ 3-4 ಎಕರೆ ಪ್ರದೇಶದ ತೊಗರಿ ಹಾಗೂ ನೆಲಗಡಲೆ ಗಿಡಗಳ ತುದಿ ಕತ್ತರಿಸಬಹುದು.
ಎರಡೆಕರೆ ಪ್ರದೇಶದ ತೊಗರಿ ತುದಿ ಕತ್ತರಿಸಬೇಕಾದರೆ ಕನಿಷ್ಠ 10-12 ಕೂಲಿ ಕಾರ್ಮಿಕರು ಬೇಕು. ಅಷ್ಟೇ ಅಲ್ಲ, 2 ಸಾವಿರ ರೂಪಾಯಿ ಖರ್ಚುಂಟು. ಆದ್ರೆ ಈ ಯಂತ್ರದ ಬೆಲೆ 1,500 ರೂ ಇದ್ದು, ಸೋಲಾರ್ ಮತ್ತು ವಿದ್ಯುಚ್ಛಕ್ತಿ ಸಹಾಯದಿಂದ ಚಲಾಯಿಸಬಹುದಾಗಿದೆ. ಕೆಲವೇ ತಾಸಿನಲ್ಲಿ ಮೂರ್ನಾಲ್ಕು ಎಕರೆ ಪ್ರದೇಶದಷ್ಟು ಬೆಳೆಯ ತುದಿ ಕತ್ತರಿಸುವುದರಿಂದ ಸಮಯ, ಹಣದ ಉಳಿತಾಯದ ಜೊತೆಗೆ ಇಳುವರಿಯೂ ಹೆಚ್ಚುತ್ತೆ.
ರೈತ ಕಂಡುಹಿಡಿದ ಸರಳ ಯಂತ್ರ:
ಕಲಬುರಗಿಯ ಶರಣಬಸಪ್ಪ ಪಿ.ಪಾಟೀಲ್ ಎಂಬ ಪ್ರಗತಿಪರ ರೈತ ಈ ಸಾಧನ ಕಂಡುಹಿಡಿದಿದ್ದಾರೆ. ಕಾರ್ಮಿಕರಿಗೆ ನೀಡುವ ಕೂಲಿ ಹಣದ ಬದಲಿಗೆ ಈ ಯಂತ್ರ ಖರೀದಿಸಿದರೆ ರೈತರು ಹಲವಾರು ವರ್ಷಗಳ ಕಾಲ ಬೆಳೆಯ ತುದಿ ಕತ್ತರಿಸಬಹುದು.
ಇದು ಉತ್ತಮ ಬೇಸಾಯ ಕ್ರಮ:
ತೊಗರಿ ತುದಿ ಚಿವುಟುವುದು ಉತ್ತಮ ಬೇಸಾಯ ಕ್ರಮವೂ ಹೌದು. ಹೀಗೆ ತುದಿ ಚಿವುಟಲು ಕಾರ್ಮಿಕರ ಕೊರತೆ ಇದೆ. ಒಂದು ವೇಳೆ ಸಿಕ್ಕರೂ ಹೆಚ್ಚು ವೆಚ್ಚ ಭರಿಸಬೇಕು. ಆದ್ದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಲಬುರಗಿ ರೈತ ಶರಣಬಸಪ್ಪ ಕಂಡುಹಿಡಿದಿರುವ ಸರಳ ಸಾಧನವನ್ನು ಜಿಲ್ಲೆಗೆ ತರಿಸಿದ್ದು ಪದ್ಧತಿಯ ಪ್ರಾತ್ಯಕ್ಷಿಕೆ ತೋರಿಸಲಾಗುತ್ತಿದೆ. 45 ದಿನ ಮತ್ತು 65 ದಿನಕ್ಕೆ ಈ ಯಂತ್ರ ಬಳಸಿಕೊಂಡು ತುದಿ ಕತ್ತರಿಸಲು ಪ್ರೇರೇಪಿಸಲಾಗುತ್ತಿದೆ ಎಂದು ಕೃಷಿ ವಿಜ್ಞಾನಿ ಸುನೀಲ್ ಈಟಿವಿ ಭಾರತಕ್ಕೆ ತಿಳಿಸಿದರು.
ಈ ಯಂತ್ರ ಬಹಳ ಸರಳ ಮತ್ತು ಅಗ್ಗವಾಗಿದೆ. ಯಾರೂ ಬೇಕಾದರೂ ಬಳಸಬಹುದು. ಕಾರ್ಮಿಕರನ್ನು ಹುಡುಕುತ್ತಾ ಕೂರುವ ಬದಲು ಒಂದು ದಿನದಲ್ಲಿ ನಾವೇ ತುದಿ ಚಿವುಟಬಹುದಾಗಿದ್ದು ಬಹಳ ಅನುಕೂಲವಾಗಿದೆ ಎಂದು ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ರೈತ ಶ್ರೀಧರ್ ಸಂತಸ ವ್ಯಕ್ತಪಡಿಸಿದರು.