ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ ಹಾನಿಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ಸಚಿವ ವಿ.ಸೋಮಣ್ಣ ಅಧಿಕಾರಿಗಳ ಶನಿವಾರ ಸಭೆ ನಡೆಸಿದರು. ಮಳೆ ನಡುವೆ ಜನರ ಅಳಲು, ಕಾಳಜಿ ಕೇಂದ್ರ ತೆರೆದು ಸೇವೆ, ಕಣ್ಣಳತೆ ಸರ್ವೇ ನಡೆಸಿ ಶೀಘ್ರ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರಾಮನ ಲೆಕ್ಕ ಮಾತ್ರ ಬರೀರಿ-ಕೃಷ್ಣನ ಲೆಕ್ಕಕ್ಕೆ ಕೈ ಹಾಕಬೇಡಿ ಎಂದು ತಾಕೀತು ಮಾಡಿದರು.
ರಜೆ ತೆಗೆದುಕೊಂಡು ಮನೆಗೆ ಹೋಗು: ಹಳೇ ಜಿಲ್ಲಾಸ್ಪತ್ರೆಯನ್ನು ಈ ಹಿಂದಿನಂತೆ 24x7 ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದರೂ ಕಾನೂನು ತೊಡಕು ನೆಪ ಹೇಳಿದ ಸಿಮ್ಸ್ ಡೀನ್ ಡಾ.ಸಂಜೀವ್ ಕುಮಾರ್ ವಿರುದ್ದ ಗರಂ ಆದ ಸೋಮಣ್ಣ, "6 ತಿಂಗಳು ರಜೆ ತೆಗೆದುಕೊಂಡು ಮನೆಗೆ ಹೋಗು, ನಾನು ಮಾಡಿಸುತ್ತೇನೆ' ಎಲ್ಲವನ್ನೂ ತಿಳಿದೇ ನಿನಗೆ ಹೇಳಿರುವುದು, ನಿನ್ನ ಸಮಜಾಯಿಷಿ ಬೇಡ" ಎಂದು ಗರಂ ಆದರು.
ಶಾಸಕ ಮತ್ತು ಡಿಡಿಪಿಐ ವಿವರ ವ್ಯತ್ಯಾಸ- ಸಚಿವರಿಗೆ ಸಿಟ್ಟು: ಡಿಡಿಪಿಐ ಮಂಜುನಾಥ್ ಮಳೆಹಾನಿ ಮಾಹಿತಿ ಕೊಟ್ಟು 7 ಕೋಟಿ ರೂ. ಅನುದಾನ ನೀಡಿದರೆ ಎಲ್ಲಾ ಶಾಲಾ ಕಟ್ಟಡಗಳ ದುರಸ್ಥಿ ಆಗಲಿದೆ ಎಂದರು. ಏಳು ಕೋಟಿ ರೂ ಪರಿಹಾರದಲ್ಲಿ ಎಲ್ಲಾ ಶಾಲಾ ಸಮಸ್ಯೆಗಳು ಪರಿಹಾರವಾಗುವುದೇ? ಎಂದು ಸಚಿವರು ಕೇಳಿದರು. ನಿರುತ್ತರರಾದ ಡಿಡಿಪಿಐಗೆ ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ, ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳ ಸರ್ವೇಯೇ ತಪ್ಪು, ಶಾಸಕರು ಹೇಳುತ್ತಿರುವುದು ಒಂದು, ನೀವು ಹೇಳುತ್ತಿರುವುದು ಒಂದು ಎಂದು ತರಾಟೆಗೆ ತೆಗೆದುಕೊಂಡರು.
ಬಳಿಕ ಇನ್ನೊಂದು ಸಭೆ: ನೀರಾವರಿ ಇಲಾಖೆ ಅಧಿಕಾರಿಗಳು, ಚಾಮರಾಜನಗರ ನಗರಸಭೆ ಆಯುಕ್ತ, ಪಿಡಿ ಅವರನ್ನೂ ಜಾಡಿಸಿ ಶೀಘ್ರದಲ್ಲೇ ಮತ್ತೊಂದು ಸಭೆ ಕರೆದು ಕೂಲಂಕಷವಾಗಿ ಚರ್ಚಿಸುತ್ತೇನೆ, ಮೈಸೂರಿಗೆ ಹೋಗೋದು ಬಿಟ್ಟು ಕೆಲಸ ಮಾಡಿ ಎಂದರು.
ಸಚಿವ ಸೋಮಣ್ಣಗೆ ತರಾಟೆ: ಮಳೆಹಾನಿ ಸಭೆ ಬಳಿಕ ನಿಗದಿಯಾಗಿದ್ದ ಸಂಘ-ಸಂಸ್ಥೆಗಳೊಟ್ಟಿಗೆ ಜಿಲ್ಲಾ ದಸರಾ ಸಭೆಯಲ್ಲಿ ಹೋರಾಟಗಾರರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಸರಾ ಸಭೆ ಕರೆದು ಎರಡು ಗಂಟೆ ಕಾಯಿಸಿ, ಮುಂದೆ ಸಭೆ ಮಾಡೋಣ ಎಂದು ಮಲೆಮಹದೇಶ್ವರ ಬೆಟ್ಟಕ್ಕೆ ಸಚಿವರು ತೆರಳಲು ಮೇಲೇಳುತ್ತಿದ್ದಂತೆ ಕುಪಿತಗೊಂಡ ಹೋರಾಟಗಾರರು ಸಭೆಯಲ್ಲಿ ಅನಿಸಿಕೆ ಹೇಳಲು ಇಚ್ಚಿಸುವವರನ್ನು ಸುಮ್ಮನೆ ಕೂರಿ ಎನ್ನುತ್ತಿದ್ದೀರಿ ಎಂದು ಕೆರಳಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮತ್ತೊಂದು ದಸರಾ ಸಭೆ: ಕೊನೆಗೆ ಸಭೆ ಕರೆದಿರುವುದೇ ನನಗೆ ಗೊತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯ ಮೇಲೆ ಹಾಕಿ ಜಾರಿಕೊಂಡು ಕ್ಷಮೆ ಕೇಳಿದ ಸಚಿವರು ಪರಿಸ್ಥಿತಿ ತಿಳಿಗೊಳಿಸಿದರು. 4-5 ದಿನದಲ್ಲಿ ಬೆಂಗಳೂರಲ್ಲಿ ದಸರಾ ಸಭೆ ಕರೆಯಲಿದ್ದು ಚೆನ್ನಾಗಿ ದಸರಾ ಮಾಡೋಣ, ಯಾರೂ ಮನನೊಂದುಕೊಳ್ಳಬೇಡಿ, ಬಸ್ ಮಾಡಿ ನಿಮ್ಮನ್ನು ಕರೆಸಿಕೊಳ್ಳುತ್ತೇನೆ ಎಂದು ಗಲಾಟೆ ಪ್ರಕರಣ ಮುಕ್ತಾಯಗೊಳಿಸಿದರು.
ಇದನ್ನೂ ಓದಿ: ಶೀಘ್ರದಲ್ಲೇ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ನೇರ ನೇಮಕಾತಿ: ಶಿಕ್ಷಣ ಸಚಿವ ನಾಗೇಶ್ ಮಾಹಿತಿ