ಕೊಳ್ಳೇಗಾಲ: ಅಗ್ಗದ ಬೆಲೆಗೆ ಸಿಗುವ ವೈಟ್ನರ್, ಸಲ್ಯೂಷನ್ ಮೂಲಕ ಅಲೆಮಾರಿ ಜನಾಂಗದ ಮಕ್ಕಳು ಕಿಕ್ಕೇರಿಸಿಕೊಂಡು ನಶೆಯಲ್ಲಿ ನಡೆದಾಡುವ ದೃಶ್ಯ ಪಟ್ಟಣದಲ್ಲಿ ಸಾಮಾನ್ಯವಾಗಿದ್ದು, ಜನರ ಕಣ್ಣಿಗೆ ಕಾಣುವ ಈ ದೃಶ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲ ಎಂಬುದು ಆಶ್ಚರ್ಯ.
ಶಿಕ್ಷಣವಿಲ್ಲದೇ ಭಿಕ್ಷೆ ಬೇಡುತ್ತ ಬೀದಿ ಬೀದಿ ಅಲೆಯುವ ಈ ಮಕ್ಕಳಿಗೆ ಪ್ರಪಂಚದ ಅರಿವೆ ಇಲ್ಲ. ಭಿಕ್ಷೆ ಬೇಡಿ ಬಂದ ಹಣದಿಂದ ಸೆಲ್ಯೂಷನ್ ಹಾಗೂ ವೈಟ್ನರ್ ಕೊಂಡು ನಶೆಯಲ್ಲಿ ಮುಳುಗುತ್ತಿದ್ದಾರೆ. ಕದ್ದುಮುಚ್ಚಿ ಗಾಂಜಾ ಹೊಗೆ ಎಳೆಯುತ್ತಿದ್ದನ್ನು ಕಾಣುತ್ತಿದ್ದ ಜನರಿಗೆ ಈಗ ಹಗಲಿನಲ್ಲೇ ದುಶ್ಚಟಗಳ ದರ್ಶನವಾಗುತ್ತಿದೆ.
ಅಲೆಮಾರಿ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಾಫ್ ಸಿರಪ್, ವೈಟ್ನರ್, ಸಲ್ಯೂಷನ್, ಥಿನ್ನರ್ಗಳು ಕೊಡಬಾರದೆಂಬ ಮೌಖಿಕ ಆದೇಶ ಇದ್ದರೂ ಇವರ ಕೈಗೆ ಅವ್ಯಾಹತವಾಗಿ ಸಿಗುತ್ತಿವೆ. ಇಷ್ಟು ನಿರ್ಭಯವಾಗಿ ನಡೆಯುತ್ತಿರುವ ಇಂತಹ ದುಷ್ಕೃತ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲದಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಶಿವರಾಜ್ ಆರ್.ಮುಧೋಳ್, ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಸಾರ್ವಜನಿಕರು ಇಂತಹ ಘಟನೆ ನೋಡಿದರೆ ನಮಗೆ ತಿಳಿಸಬಹುದು ಎಂದಿದ್ದಾರೆ.
ವೈಟ್ನರ್, ಪೇಂಟ್ ಥಿನ್ನರ್, ಸೆಲ್ಯೂಷನ್‍ನಲ್ಲಿ ಕೆಮಿಕಲ್‍ಗಳನ್ನು ಬಳಸುತ್ತಾರೆ. ಕೆಲವರು ಅಂತಹ ವಸ್ತುಗಳನ್ನು ಪಡೆದು ಮತ್ತೇರಿಸಿಕೊಳ್ಳುವುದುರಿಂದ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ತಿಳಿಸಿದ್ದಾರೆ.