ಕೊಳ್ಳೇಗಾಲ: ಹತ್ತಾರು ತಿಂಗಳಿನಿಂದ ನನೆಗುದ್ದಿಗೆ ಬಿದ್ದಿರುವ ನರೀಪುರ-ಪಾಳ್ಯ ರಸ್ತೆ ಕಾಮಗಾರಿಯನ್ನು ಅಧಿವೇಶನ ಮುಗಿಯುವಷ್ಟರಲ್ಲಿ ಪ್ರಾರಂಭಿಸಿಸುತ್ತೇನೆ ಎಂದು ಸುಳ್ಳು ಭರವಸೆ ನೀಡಿದ್ದರು. ಶಾಸಕರು ಮಾತಿಗೆ ತಪ್ಪಿದ ಕಾರಣದಿಂದಾಗಿ ಅವರ ಅಣಕು ಶವ ಯಾತ್ರೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಅಣಗಳ್ಳಿ ಬಸವರಾಜು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನ ಮುಗಿಸಿ ಬರುವಷ್ಟರಲ್ಲಿ ನನ್ನ ಕ್ಷೇತ್ರದ ನರೀಪುರ ಗ್ರಾಮದ ರಸ್ತೆ ಕಾಮಗಾರಿ ಪ್ರಾರಂಭಿಸದೇ ಹೋದರೆ ನನ್ನ ನೇತೃತ್ವದಲ್ಲೇ ಉಗ್ರ ಹೋರಾಟ ಮಾಡುತ್ತೇನೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ಸುಳ್ಳು ಭರವಸೆ ನೀಡಿ, ಕಲಾಪ ಮುಗಿದು ವಾರ ಕಳೆದರೂ ತುಟಿ ಬಿಚ್ಚದ, ಭರವಸೆ ಪೂರೈಸದ ಹನೂರು ಶಾಸಕ ನರೇಂದ್ರ ವಿರುದ್ಧ ಅಕ್ಟೋಬರ್13 ರಂದು ಉಗ್ರ ಹೋರಾಟ ಮಾಡುತ್ತೇವೆ. ಇದೇ ಸಮಯದಲ್ಲಿ ಶಾಸಕರ ಅಣಕು ಶವಯಾತ್ರೆ ನಡೆಸಿ ರಸ್ತೆಯಲ್ಲಿ ಸುಡುತ್ತೇವೆ ಎಂದು ಘೋಷಿಸಿದರು.
ಕಳೆದ ವರ್ಷ ಡಿ.17ರಲ್ಲಿ ಕೊಳ್ಳೇಗಾಲ ತಾಲೂಕಿನ ನರೀಪುರ-ಪಾಳ್ಯ ಗ್ರಾಮದ ರಸ್ತೆಗೆ ಶಾಸಕ ನರೇಂದ್ರ ಭೂಮಿ ಪೂಜೆ ನೆರವೇರಿಸಿದ್ದು, ಇಂದಿಗೆ 10 ತಿಂಗಳಾಯಿತು. ಆದರೆ, ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಹಳ್ಳ - ಕೊಳ್ಳ, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಜನರ ಸಂಚಾರ ಚಿಂತಾಜನಕವಾಗಿದ್ದು, ಸಾವಿನ ದಾರಿಯಲ್ಲಿಯೇ ಸಾಗುತ್ತಿರುವಂತೆ ಭಾಸವುಗುತ್ತದೆ. ಈ ಹಿನ್ನೆಲೆ ಇತ್ತೀಚ್ಚೆಗಷ್ಟೇ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದೆವು. ಅಷ್ಟರಲ್ಲಿ ಮಾಧ್ಯಮಗಳಲ್ಲಿ ಮಾತನಾಡಿದ ಶಾಸಕ ನರೇಂದ್ರ, ಅಧಿವೇಶನ ಮುಗಿಯುವಷ್ಟರಲ್ಲಿ ಕಾಮಗಾರಿ ಪ್ರಾರಂಭವಾಗುವಂತೆ ಮಾಡುತ್ತೇನೆ. ಇಲ್ಲವಾದಲ್ಲಿ ನಾನೇ ಪ್ರತಿಭಟನೆ ನಡೆಸುತ್ತೇನೆ ಎಂದು ಜನರಿಗೆ ತಿಳಿಸಿದ್ದರು. ಆದರೆ ಕಲಾಪ ಮುಗಿದು ವಾರ ಕಳೆದರೂ ಸಹ ರಸ್ತೆ ನಿರ್ಮಾಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಮಲೆ ಮಹದೇಶ್ವರದ ಹುಂಡಿ ಹಣವನ್ನು ರಸ್ತೆಗೆ ಬಳಸಿ: ಕೊಳ್ಳೇಗಾಲ - ಮಲೆ ಮಹದೇಶ್ವರ ಬೆಟ್ಟದ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಈ ರಸ್ತೆಯಲ್ಲಿ ಅಪಘಾತ ಸಂಭವಿಸುವ ಮೂಲಕ ದಿನ ನಿತ್ಯ ಸಾವು - ನೋವಿನ ಪ್ರಕರಣಗಳು ದಾಖಲಾಗುತ್ತಿವೆ. ಇತ್ತೀಚೆಗಷ್ಟೆ ಸಿದಯ್ಯನಪುರ ಗ್ರಾಮದ ಬಳಿ ಗುಂಡಿ ತಪ್ಪಿಸಲು ಹೋಗಿ ಶಿಕ್ಷಕರೊಬ್ಬರು ಬಿದ್ದು, ತಲೆಗೆ ತೀವ್ರವಾಗಿ ಹೊಡೆತ ಬಿದ್ದಿದ್ದರಿಂದ ಪ್ರಾಣ ಬಿಟ್ಟಿದ್ದರು. ಬಳಿಕ, ಎಚ್ಚತ್ತ ಅಧಿಕಾರಿಗಳು ರಸ್ತೆಯಲ್ಲಿ ಇದೀಗ ಪ್ಯಾಚ್ ವರ್ಕ್ ನಡೆಸುತ್ತಿದ್ದಾರೆ. ಜನರ ಪ್ರಾಣ ಹೋದ ಮೇಲೆ ರಸ್ತೆ ಸರಿಪಡಿಸಿದರೆ ಪ್ರಯೋಜನವಾದರೂ ಏನು?. ರಸ್ತೆ ಕಾಮಗಾರಿಗೆ ಸರ್ಕಾರದ ಹಣವನ್ನು ಕಾಯುವ ಬದಲು, ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಗ್ರಹವಾಗುವ ಹಣವನ್ನು ರಸ್ತೆ ಅಭಿವೃದ್ಧಿಗೆ ಬಳಸಿ, ಮಾದಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಉತ್ತಮ ರಸ್ತೆಯನ್ನು ಕಲ್ಪಿಸಲಿ ಎಂದು ಇದೇ ವೇಳೆ, ಒತ್ತಾಯಿಸಿದರು.