ಕೊಳ್ಳೇಗಾಲ(ಚಾಮರಾಜನಗರ): ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಕಾರ್ಯಕ್ರಮ ಲಾಕ್ಡೌನ್ ಪರಿಣಾಮ ಕೊಳ್ಳೇಗಾಲದ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದ ಬಳಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ.
ಪಟ್ಟಣದ ಮುಡಿಗುಂಡ ನಿವಾಸಿ ಚಂದ್ರಮ್ಮ ಮತ್ತು ಕೃಷ್ಣನಾಯಕ ಅವರ ಪುತ್ರಿ ಕೆ. ಅನುಷಾ ಹಾಗೂ ಮೈಸೂರಿನ ಹೆಬ್ಬಾಳು ಬಳಿಯ ಬೈರವೇಶ್ವರ ನಗರದ ನಿವಾಸಿ ಮಹಾಲಕ್ಷ್ಮಿ ಮತ್ತು ಕೆ. ನಾಗರಾಜು ಅವರ ಪುತ್ರ ಎಸ್. ಸುರೇಶ್ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟವರು.
ನಿಗದಿತ ದಿನದಂದು ಮದುವೆಯಾಗುವ ಉದ್ದೇಶದಿಂದ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಸಂಪರ್ಕ ಸಾಧಿಸಿ ಅನುಮತಿ ಪಡೆದು ಕೊಳ್ಳೇಗಾಲದ ದೇವಸ್ಥಾನದಲ್ಲಿ ಮದುವೆ ಮಾಡಲಾಗಿದೆ.
ಮೈಸೂರಿನ ಕುಂಬಾರಕೊಪ್ಪಲಿನ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 19ರಂದು ನಿಶ್ಚಯವಾಗಿದ್ದ ಮದುವೆ, ಮೈಸೂರು ರೆಡ್ ಝೋನ್ ಆದ ಪರಿಣಾಮ ಕೊಳ್ಳೇಗಾಲದಲ್ಲಿ ನಡೆದಿದೆ.
ಇವರ ಬಳಿಯಿದ್ದ ದಾಖಲೆಗಳನ್ನು ಆಧರಿಸಿ ದೇವಸ್ಥಾನದ ಆರ್ಚಕ ಸುದರ್ಶನ್ ಭಟ್ ದೇಗುಲದ ಎದುರಿನ ಬನ್ನಿ ಮಂಟಪದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಧು - ವರನಿಗೆ ಮಾಸ್ಕ್ ಹಾಕಿಸಿ ಮದುವೆಯ ಶಾಸ್ತ್ರ ನೆರವೇರಿಸಿದರು.