ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯ, ಕಾಂಗ್ರೆಸ್ ಯುವ ಮುಖಂಡ ಡಿ.ಎನ್. ನಟರಾಜು ಹಾಗೂ ಎ.ಆರ್. ಕೃಷ್ಣಮೂರ್ತಿ ಸಹೋದರ ಎ.ಆರ್. ಬಾಲರಾಜು ಕೈಬಿಟ್ಟು ಕಮಲ ಹಿಡಿದಿದ್ದಾರೆ.
ನಗರದ ಮಾರಿಗುಡಿ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿ ಕಾಂಗ್ರೆಸ್ಗೆ ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯ ಆಪ್ತ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಂಬಂಧಿಯೂ ಆಗಿರುವ ಡಿ.ಎನ್. ನಟರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿ, 'ಪಕ್ಷದಲ್ಲಿ ನನಗೆ ಸಿಗಬೇಕಾದ ಗೌರವ ಮತ್ತು ಸ್ಥಾನ ಸಿಗದಿದ್ದರಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯ ವರಿಷ್ಠರ ಅಣತಿಯಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ' ಎಂದರು.
ಚಾಮರಾಜನಗರ ತಾಲೂಕಿನ ಚಂದಕವಾಡಿ ಜಿ.ಪಂ. ಕ್ಷೇತ್ರದ ಸದಸ್ಯ ಆರ್. ಬಾಲರಾಜು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾಲರಾಜು ಸಹೋದರ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಕಾಂಗ್ರೆಸ್ ಸೇರ್ಪಡೆಯಾಗಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಅಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಬಾಲರಾಜು ಕೂಡ ಕೈ ಪಾಳೆಯ ಸೇರಿದ್ದರು. ಆದರೆ, ನಂತರ ದಿನಗಳಲ್ಲಿ ಬಾಲರಾಜು ಅವರನ್ನು ಕಾಂಗ್ರೆಸ್ನಲ್ಲಿ ಕಡೆಗಣಿಸಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗದೆ, ಮಾತೃಪಕ್ಷ ಬಿಜೆಪಿಗೆ ಹೋಗಲಾರದೆ ಗೊಂದಲದಲ್ಲಿ ಸಿಲುಕಿದ್ದರು.
ಕಾಂಗ್ರೆಸ್ ಸೇರ್ಪಡೆಯಾಗಿದ್ದರೂ ಸಹ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬಿಜೆಪಿ ಸದಸ್ಯರಾಗಿಯೇ ಮುಂದುವರಿದ್ದರು. ಇದೀಗ ಬಾಲರಾಜು ಬೆಂಬಲಿಗರು ಭವಿಷ್ಯದ ದೃಷ್ಠಿಯಿಂದ ಕಮಲ ಮುಡಿದಿದ್ದಾರೆ ಎಂದು ಬೆಂಬಲಿಗರು ತಿಳಿಸಿದ್ದಾರೆ.