ಚಾಮರಾಜನಗರ: ವಿಪಕ್ಷದವರು ಉಪ ಚುನಾವಣೆಯಲ್ಲಿ ಸೋತು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾನು ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಕೀಲರಾಗಿದ್ದ ಅವರು ಸುಮ್ಮನೆ ಆರೋಪ ಮಾಡುವ ಬದಲು ಸಾಕ್ಷಿ ಕೊಟ್ಟು ಮಾತನಾಡಲಿ. ಅವರಿಗೆ ಮಾತನಾಡಲು ಬೇರೇನೂ ಇಲ್ಲ, ಹಾಗಾಗಿ ಇಂಥ ಹೇಳಿಕೆ ಕೊಡುತ್ತಿದ್ದಾರೆ. ರಸ್ತೆಯಲ್ಲಿ ಮಾತನಾಡಿದಂತೆ ಮಾತನಾಡುವುದನ್ನು ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಸಂಸತ್ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷವನ್ನು ಅವಲಂಬಿಸಿಲ್ಲ. ಕಾರ್ಯಕರ್ತರನ್ನು ನಂಬಿ ಚುನಾವಣೆ ಎದುರಿಸುತ್ತಿದ್ದೇವೆ. 60 ವರ್ಷದ ಇತಿಹಾಸವಿರುವ ಕಾಂಗ್ರೆಸ್ ಶಿರಾ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ದೆಹಲಿಗೆ ನಮ್ಮ ನಾಯಕರು ಹೋದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ, ಅವರವರ ಕೆಲಸದ ಮೇಲೆ ಹೋಗಿರುತ್ತಾರೆ. ರೇಣುಕಾಚಾರ್ಯ ಹೇಳುವುದು ಸರಿಯಾಗಿದೆ, ಬೇರೆಯವರು ಹೇಳಿಕೆಯೂ ಸರಿಯಾಗಿಯೇ ಇದೆ. ಇಬ್ಬರನ್ನು ಕರೆಸಿ ಮಾತನಾಡಿಸಿ ಯಡಿಯೂರಪ್ಪ ಸರಿದೂಗಿಸಲಿದ್ದಾರೆ ಎಂದರು.
ವಿಶ್ವನಾಥ್ ಅವರ ಕುರಿತು ಹೈಕೋರ್ಟ್ನಿಂದ ಬಂದಿರುವ ಆದೇಶ ಆಘಾತ ತಂದಿದೆ. ಸಿಎಂ ಹಾಗೂ ಪಕ್ಷದ ವರಿಷ್ಠರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.