ಚಾಮರಾಜನಗರ : ಕೊರೊನಾ ಭೀತಿ ಕಡಿಮೆಯಾಗಿರುವುದರಿಂದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂರ್ಯಕಾಂತಿ ಜಮೀನುಗಳಿಗೆ ಲಗ್ಗೆ ಇಟ್ಟು ಫೋಟೋ ಕ್ಲಿಕ್ಕಿಸುತ್ತಿದ್ದಾರೆ.
ಶಿಂಡನಪುರ, ಬೇಗೂರು, ರಾಘವಾಪುರ, ಮಾಡ್ರಹಳ್ಳಿ, ಹಂಗಳ ಗ್ರಾಮಗಳ ರಸ್ತೆಬದಿ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಫಸಲು ನಳನಳಿಸುತ್ತಿದೆ. ಹೀಗಾಗಿ, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಜಮೀನನ್ನೇ ಕಾಣದ ಸಿಟಿ ಮಕ್ಕಳು ಆಟ ಆಡುತ್ತಾ, ಹೂವು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.
ಹಂಗಳ ಗ್ರಾಮದ ನಿವೃತ್ತ ಶಿಕ್ಷಕ ರಾಜಶೆಟ್ಟಿ ಎಂಬುವರು ತಮ್ಮ ಕೃಷಿ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ನೂರಾರು ಪ್ರವಾಸಿಗರು ಇವರ ಜಮೀನಿಗೆ ಭೇಟಿ ಕೊಟ್ಟು 2-3 ತಾಸು ಸಮಯ ಕಳೆದು, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಜಮೀನು ಮಾಲೀಕ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಗಿಡಗಳನ್ನು ತುಳಿದು ಹಾಳು ಮಾಡಬೇಡಿ. ಹೂವುಗಳನ್ನು ಕೀಳಬೇಡಿ ಎಂದಷ್ಟೇ ಕಿವಿಮಾತು ಹೇಳುತ್ತೇನೆ. ಸಿಟಿ ಮಂದಿಗೆ ಜಮೀನುಗಳೆಂದರೆ ಅಚ್ಚರಿ. ನಾನು ಯಾವುದೇ ಶುಲ್ಕ ಏನು ಪಡೆಯುತ್ತಿಲ್ಲ. ಜನರು ಖುಷಿ ಪಟ್ಟರೇ ಸಾಕು. ಆದಷ್ಟು ಎಲ್ಲರೂ ಕೃಷಿಕರಾಗಬೇಕೆಂಬುದೇ ನನ್ನ ಬಯಕೆ ಎಂದರು.
ಹೂವಿನಂದಕ್ಕೆ ಪ್ರವಾಸಿಗರು ಫಿದಾ : ಸೂರ್ಯನ ಕಿರಣಗಳತ್ತ ಮೋರೆ ತಿರುಗಿಸಿ ನಗು ಬೀರುವ ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಈ ಕುರಿತು ಬೆಂಗಳೂರಿನ ಪ್ರವಾಸಿಗ ಚಿದಾನಂದ ಈಟಿವಿ ಭಾರತದೊಂದಿಗೆ ಮಾತನಾಡಿ, ವೀಕೆಂಡ್ ಟ್ರಿಪ್ಪಿಗಾಗಿ ಬಂಡೀಪುರಕ್ಕೆ ತೆರಳುತ್ತಿದ್ದಾಗ ಈ ಜಮೀನಿನ ಚೆಲುವು ಕಂಡು ಬಂದೆವು.
ಫೋಟೋಗಳನ್ನು ತೆಗೆದು ಸೋಷಿಯಲ್ ಮೀಡಿಯಾ, ಸ್ನೇಹಿತರಿಗೆ ಹಂಚಿಕೊಂಡು ಖುಷಿ ಪಡುತ್ತಿದ್ದೇವೆ. ನಮ್ಮ ಮಕ್ಕಳಂತೂ ಜಮೀನು ಕಂಡು ಹಿಂತಿರುಗಲು ಒಪ್ಪುತ್ತಿಲ್ಲ. ನಮಗಂತೂ ಈ ಫೋಟೋ ಸಂಭ್ರಮ ಸಾಕಷ್ಟು ಮುದ ನೀಡಿತು ಎಂದರು.
ಪ್ರವಾಸಿ ತಾಣಗಳು ಮತ್ತೆ ಜನರಿಂದ ಗಿಜಿಗಿಜಿ ಎನ್ನುವ ಜೊತೆಗೆ ಸೂರ್ಯಕಾಂತಿ ಜಮೀನುಗಳಲ್ಲಿ ಸೆಲ್ಫಿ ಕ್ಲಿಕ್ ಸದ್ದು ಜೋರಾಗಿದೆ. ಸದ್ಯಕ್ಕೆ ಯಾವ ರೈತರು ಸೆಲ್ಫಿಗೆ ಶುಲ್ಕ ಪಡೆಯುತ್ತಿಲ್ಲ. ಕೆಲ ಪ್ರವಾಸಿಗರು ಸ್ವಯಂ ಪ್ರೇರಣೆಯಿಂದ ಹಣ ಕೊಟ್ಟರಷ್ಟೇ ರೈತರು ಪಡೆಯುತ್ತಿದ್ದಾರೆ.
ಓದಿ: ಮುಖ್ಯಮಂತ್ರಿ ಆಗಬೇಕೆಂದು ನಾನು ಗಡ್ಡ ಬಿಟ್ಟವನಲ್ಲ: ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂದ ಸಿ ಟಿ ರವಿ