ಚಾಮರಾಜನಗರ: 7-8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣವನ್ನು ಕೂಡಲೇ ನೀಡಬೆಕೆಂದು ಒತ್ತಾಯಿಸಿ ಎಸ್ಡಿಪಿಐ ಸಂಘಟನೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ ಸಂಧ್ಯಾ ಸುರಕ್ಷ ಹೀಗೆ ಅನೇಕ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವ ಪಿಂಚಣಿದಾರರಿಗೆ 7-8 ತಿಂಗಳಿನಿಂದ ಪಿಂಚಣಿ ಹಣ ಸಂದಾಯವಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಸ್ಥಗಿತಗೊಂಡಿದೆ. ಪಿಂಚಣಿ ಪಡೆಯಲು ನಾಡ ಕಚೇರಿ, ತಾಲ್ಲೂಕು ಕಚೇರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಗೋಗರೆಯುವುದು ಸಾಮಾನ್ಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಕೂಡಲೇ ಫಲಾನುಭವಿಗಳಿಗೆ ಹಣ ನೀಡಿ ನಿರಾತಂಕವಾಗಿ ಜೀವನ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನಿರಂತರವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆ ಕಾರ್ಯಕರ್ತರು ಎಚ್ಚರಿಸಿದರು.