ಕೊಳ್ಳೇಗಾಲ: ಸರ್ಕಾರ ಕೊರೊನಾ ಹರಡುವಿಕೆಯ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಗೆ ತಂದಿದೆ. ಇದರಿಂದ ಬಡ ಕೂಲಿ ಕಾರ್ಮಿಕರ ಬದುಕಿಗೆ ಆರ್ಥಿಕ ಸಂಕಷ್ಟದ ಅಲೆ ಬಡಿದು ತುತ್ತಿನ ಚೀಲ ತುಂಬಿಸಿಕೊಳ್ಳಲಾಗದ ಕಷ್ಟದ ಪರಿಸ್ಥಿತಿ ಬಂದೊದಗಿದೆ.
ಓದಿ: ಕೊರೊನಾ ಸೋಂಕಿತರಿಗೆ ಉಚಿತ ಪೌಷ್ಟಿಕ ಆಹಾರ ನೀಡುತ್ತಿದೆ ಪ್ರೇರಣ ಯುವ ಸಂಸ್ಥೆ !
ಇನ್ನೂ ಒಂದೆಡೆ ಕಾಣದ ಕೊರೊನಾ ಮಾರಿ ತನ್ನ ಕಬಂಧಬಾಹು ಚಾಚುತ್ತಿದೆ. ಹಳ್ಳಿಗಳಿಂದ ಕೂಡಿದ ನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಗ್ರಾಮಾಂತರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಈ ಮಧ್ಯೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಮಹತ್ವದ ಕೆಲಸವೊಂದಕ್ಕೆ ಚಾಲನೆ ನೀಡಿದ್ದು, ಅಲ್ಲಿನ ಬಡ ಸೋಂಕಿತರಿಗೆ ಆಹಾರ ಭದ್ರತೆಯನ್ನು ಒದಗಿಸುತ್ತಿದೆ. ಸತ್ತೇಗಾಲ ಪಂಚಾಯಿತಿಯಲ್ಲಿ 17 ಹಳ್ಳಿಗಳಿದ್ದು, ಅಲ್ಲಿನ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯ ಕುಟುಂಬಕ್ಕೆ ಸ್ಪಂದಿಸುವ ದೃಷ್ಟಿಯಿಂದ ಗ್ರಾಪಂ ಅನುದಾನದಲ್ಲೇ ಆಹಾರ ಪದಾರ್ಥಗಳನ್ನು ಖರೀದಿಸಿ ಕಿಟ್ ವಿತರಿಸುತ್ತಿದೆ.
ಇದುವರೆಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 165 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 155 ಪ್ರತ್ಯೇಕ ಕುಟುಂಬಗಳಾಗಿವೆ. ಇದರಲ್ಲಿ ಬಡ ಸೋಂಕಿತರ ಕುಟುಂಬಗಳನ್ನು ಆಯಾ ಸದಸ್ಯರ ಸಹಕಾರದಲ್ಲಿ ಗುರುತಿಸಿ ಅಂತಹ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದ್ದು, ಸದಸ್ಯರು ಮನೆ ಮನೆಗೆ ತೆರಳಿ ಬಡ ಸೋಂಕಿತರ ಕುಟುಂಬಕ್ಕೆ ಕಿಟ್ ನೀಡುತ್ತಿದ್ದಾರೆ. ಒಟ್ಟಾರೆ ಲಾಕ್ಡೌನ್ ಸಂಕಷ್ಟದಲ್ಲಿ ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿರುವ ಬಡವರ ನೆರವಿಗೆ ನಿಂತ ಸತ್ತೇಗಾಲ ಗ್ರಾಮ ಪಂಚಾಯಿತಿ ಮಾದರಿ ಕಾರ್ಯಮಾಡಲು ಮುಂದಾಗಿದೆ.
ಇನ್ನೂ ಸೋಂಕಿತರ ಮನೆ ಹೊರತು ಪಡಿಸಿ ನಿರ್ಗತಿಕರು, ಆಶಾ ಕಾರ್ಯಕರ್ತೆಯರು, ಬಡ ಡಿ-ಗ್ರೂಪ್ ನೌಕರರಿಗೂ ಆಹಾರ ಕಿಟ್ ವಿತರಿಸಿದ್ದಾರೆ.
ಕಿಟ್ನಲ್ಲಿ ಅಕ್ಕಿ 10 ಕೆಜಿ, ಬೇಳೆ 1 ಕೆಜಿ, ಹಸಿರು ಕಾಳು 1 ಕೆಜಿ, ಹುರುಳಿ ಕಾಳು 1 ಕೆಜಿ, ಉಪ್ಪು, ಟೀ ಪೌಂಡರ್, ಸಕ್ಕರೆ ಸಬೂನು, ಎಣ್ಣೆ ಇತ್ಯಾದಿ ಆಹಾರ ಪದಾರ್ಥಗಳ ಒಳಗೊಂಡ ಕಿಟ್ ಅನ್ನು ನೀಡುತ್ತಿದ್ದೇವೆ. ಈಗಾಗಲೇ 100 ಕ್ಕೂ ಹೆಚ್ಚು ಕಿಟ್ ನೀಡಿದ್ದೇವೆ. ಆಶಾ ಕಾರ್ಯಕರ್ತರು, ನೌಕರರು, ನಿರ್ಗತಿಕರಿಗೂ ಕಿಟ್ ನೀಡಲಾಗಿದೆ.