ಚಾಮರಾಜನಗರ: ಜಿಲ್ಲೆಗೆ ಕೋವಿಡ್ ವೈರಸ್ ಕಾಲಿಟ್ಟು ಬರೋಬ್ಬರಿ 19 ದಿನಗಳೇ ಕಳೆದಿವೆ. ಇದೀಗ ಗುಂಡ್ಲುಪೇಟೆ ತಾಲೂಕು ಆಡಳಿತ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಮುಂದಾಗಿದೆ.
ಜಿಲ್ಲೆಯ ಕೊರೊನಾ ಹಾಟ್ ಸ್ಪಾಟ್ ಆಗಿರುವ ಗುಂಡ್ಲುಪೇಟೆಯಲ್ಲಿ 74 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಮಂಗಳವಾರದಿಂದ ಪ್ರಾರಂಭಿಸಿದೆ.
ಪಟ್ಟಣದ ಪುರಸಭೆ, ತಾಲೂಕು ಕಚೇರಿ ಮುಂಭಾಗ, ಊಟಿ ರಸ್ತೆ ಶಾಲೆ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಔಷಧ ಸಿಂಪಡಿಸಲಾಗಿದೆ. ಪಟ್ಟಣದ ಜನ ವಸತಿ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸಲು ಇನ್ನೂ ಎಷ್ಟು ದಿನ ಬೇಕು ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಕರವೇ ಸಾಥ್: ಗುಂಡ್ಲುಪೇಟೆಯಲ್ಲಿ ಇನ್ನೂ 5-6 ದಿನ ಔಷಧ ಸಿಂಪಡಣೆ ಕಾರ್ಯ ನಡೆಸಲಿದ್ದು ಅಗ್ನಿಶಾಮಕ ಸಿಬ್ಬಂದಿಗಳೊಟ್ಟಿಗೆ ಕರವೇ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯ್ಕ ನೇತೃತ್ವದಲ್ಲಿ ಔಷಧಿ ಸಿಂಪಡಣೆಯ ಸಿಬ್ಬಂದಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.