ಚಾಮರಾಜನಗರ: ದೀಪದ ಕೆಳಗೆ ಕತ್ತಲು ಎಂಬಂತೆ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಪೊಲೀಸರೇ ಅಸುರಕ್ಷಿತ ಹೆಲ್ಮೆಟ್ ಧರಿಸಿ 'ಜನ ಜಾಗೃತಿ' ಮೂಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ ಕಾರ್ಯಕ್ಕಾಗಿ ನೀಡುವ ಬಂದೋಬಸ್ತ್ ಹೆಲ್ಮೆಟ್ಗಳನ್ನು ಧರಿಸಿದ ಪೊಲೀಸರು ಬೈಕ್ ಚಾಲನೆ ಮಾಡಿ ಹೆಲ್ಮೆಟ್ ಧರಿಸುವಂತೆ ಜನ ಜಾಗೃತಿಗಾಗಿ ಜಾಥಾ ನಡೆಸಿದರು. ಆದರೆ, ಪೊಲೀಸರೇ ಅಸುರಕ್ಷಿತ ಹೆಲ್ಮೆಟ್ ಧರಿಸುವುದು ಎಷ್ಟು ಸರಿ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಐಎಸ್ಐ ಮಾರ್ಕ್ ಇರುವ, ಕಿವಿ, ತಲೆ, ಗಲ್ಲ ಮುಚ್ಚುವ ಕವರ್ಡ್ ಹೆಲ್ಮೆಟ್ಗಳನ್ನು ಬಳಸಬೇಕು. ಬಂದೋಬಸ್ತ್ ಹೆಲ್ಮೆಟ್ಗಳನ್ನ ಬಳಸುವುದು ಸರಿಯಲ್ಲ. ಅದೇ ರೀತಿ ಟೋಪಿಯಂತೆ ಇರುವ ಪ್ಲಾಸ್ಟಿಕ್ ಹೆಲ್ಮೆಟ್, ಐಎಸ್‌ಐ ಮಾರ್ಕ್ ಇಲ್ಲದ್ದು ಬಳಸುವಂತಿಲ್ಲ ಎಂದರು.
ಒಟ್ಟಿನಲ್ಲಿ ಬಂದೋಬಸ್ತ್ಗೆ ನೀಡುವ ಹೆಲ್ಮೆಟ್ಗಳನ್ನು ಪೊಲೀಸರು ಬೈಕ್ ಚಾಲನೆಗೆ ಬಳಸಬಹುದೇ ಇಲ್ಲವೇ ಎಂಬುದನ್ನು ಮೇಲಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಅದೇ ರೀತಿ, ಕೇವಲ ಹೆಲ್ಮೆಟ್ ಅಭಿಯಾನವಷ್ಟೇ ಅಲ್ಲದೇ ಹೈ ಬೀಮ್ ಲೈಟ್, ಕರ್ಕಶ ಹಾರ್ನ್ ಬಳಕೆ ಬಗ್ಗೆಯೂ ಜಾಗೃತಿ ಮೂಡಿಸಬೇಕಿದೆ.