ಚಾಮರಾಜನಗರ: ರಸ್ತೆ ಮಧ್ಯದಲ್ಲಿ ಅಪಾಯಕ್ಕೆ ಆಹ್ವಾನಿಸುವ ಮ್ಯಾನ್ ಹೋಲ್ಗಳು, ಧುತ್ತನೇ ಎದುರಾಗುವ ಹಳ್ಳ, ರಾತ್ರಿ ವೇಳೆ ಚರಂಡಿಗೆ ಬೀಳುವ ಭಯ ಹೀಗೆ ಹತ್ತಾರು ಸಂಕಟ ನುಂಗಿಕೊಂಡು ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ವಾಹನ ಸವಾರಿ ಮಾಡಬೇಕಿದೆ.
ಹೌದು, ನಗರದ ವೀರಭದ್ರೇಶ್ವರ ಸ್ವಾಮಿ ದೇಗುಲ ಸಮೀಪ ರಸ್ತೆ ಮಾಡಿ ಅದಕ್ಕೆ ಸಮನಾಗಿ ಚರಂಡಿಯನ್ನು ತೆರೆದು ತಡೆಗೋಡೆ ಕಟ್ಟದೇ ಎಡಕ್ಕೆ ವಾಹನ ತಿರುಗಿಸಿದ ವೇಳೆ ಚರಂಡಿಗೆ ಬೀಳಬೇಕಾದ ಭಯ ವಾಹನ ಸವಾರರಲ್ಲಿ ಮನೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಚಾಮರಾಜನಗರ ಗ್ರಾಮಾಂತರ ಠಾಣೆ ಎದುರಿನ ರಸ್ತೆಯಲ್ಲಿ ಆಟೋವೊಂದು 20 ಅಡಿ ಆಳಕ್ಕೆ ಬಿದ್ದು ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ದುರ್ಘಟನೆಯೂ ನಡೆದಿದೆ.
ನಗರದ ವೀರಭದ್ರೇಶ್ವರ ದೇಗುಲ ಸಮೀಪ ರಸ್ತೆ, ಎಲ್ಐಸಿಗೆ ತೆರಳುವ ರಸ್ತೆ, ಚಾಮರಾಜನಗರ - ನಂಜನಗೂಡು ರಸ್ತೆಯ ಚರಂಡಿ ಸಮೀಪ ಯಾವುದೇ ತಡೆಗೋಡೆಗಳಿಲ್ಲದೇ ವಾಹನಗಳು ಆಗಾಗ್ಗೆ ಪಲ್ಟಿಯಾಗುವ ಪ್ರಸಂಗ ಜರುಗುತ್ತಿದ್ದರೂ ನಗರಸಭೆ ಅಧಿಕಾರಿಗಳು, ಪೊಲೀಸರು, ಲೋಕೋಪಯೋಗಿ ಇಲಾಖೆ ಮಾತ್ರ ತನಗೆ ಇದು ಸಂಬಂಧವೇ ಇಲ್ಲವೇನೋ ಎಂಬಂತೆ ಜಾಣಮೌನ ವಹಿಸಿದ್ದು ನಿತ್ಯ ವಾಹನ ಸವಾರರ ಪ್ರಾಣ ಬಾಯಿಗೆ ಬರುತ್ತಿದೆ.
ಸಾಕಷ್ಟು ವರ್ಷಗಳ ಬಳಿಕ ಆಗಿರುವ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಒಂದು ಮ್ಯಾನ್ ಹೋಲ್ ಮೇಲಿದ್ದರೇ ಮತ್ತೊಂದು ಹಳ್ಳದಲ್ಲಿದ್ದು ವಾಹನ ಸವಾರರು ಸರ್ಕಸ್ ಮಾಡಿ ಸಂಚರಿಸುತ್ತಿದ್ದಾರೆ. ಇನ್ನು, ಚಾಮರಾಜನಗರ- ನಂಜನಗೂಡು ರಸ್ತೆಯಲ್ಲಿರುವ ಫ್ಲೈಓವರ್ ರಸ್ತೆಯು ಅವೈಜ್ಞಾನಿಕವಾಗಿದ್ದು ರಸ್ತೆಯ ಎರಡು ವಿಭಿನ್ನ ವಿಸ್ತೀರ್ಣ ಹೊಂದಿ ಬೈಕ್ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಹತ್ತಾರು ಕೋಟಿ ರೂ. ವ್ಯಯಿಸಿ ರಸ್ತೆ ನಿರ್ಮಿಸುವ ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಕನಿಷ್ಠ ತಡೆಗೋಡೆ ನಿರ್ಮಿಸುವುದನ್ನು ವೈಜ್ಞಾನಿಕವಾಗಿ ಒಂದೂ ರಸ್ತೆಯನ್ನೂ ನಿರ್ಮಾಣವನ್ನು ಮಾಡದೇ ಮಗುಮ್ಮಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನಾದರೂ ಸಂಬಂಧದಪಟ್ಡ ಅಧಿಕಾರಿಗಳು ಅಪಾಯಕಾರಿಯಾಗಿ ಬದಲಾಗುತ್ತಿರುವ ಈ ರಸ್ತೆಗಳಿಗೆ ಬ್ಯಾರಿಕೇಡ್, ತಡೆಗೋಡೆ ನಿರ್ಮಿಸುವ ಮೂಲಕ ಅವೈಜ್ಞಾನಿಕ ಕಾಮಗಾರಿಗೆ ತೇಪೆ ಹಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.