ಚಾಮರಾಜನಗರ: ಬಿಜೆಪಿ ಅಂದ್ರೆ ಬೆಂಕಿ ಜಗಳ ಪಾರ್ಟಿ, ಬೆಂಕಿ ಪೊಟ್ಟಣದಂತೆ ಅವರು ಕೆಲಸ ಮಾಡಲಿದ್ದು, ಜಗಳ ಹತ್ತಿಸಿ ಅಧಿಕಾರ ಅನುಭವಿಸುತ್ತಾರೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಆಶಯದಂತೆ ಕಾಂಗ್ರೆಸ್ ಎಲ್ಲರನ್ನೂ ಭಾರತೀಯರು ಎಂದು ನೋಡುತ್ತದೆ. ಆದರೆ, ಬಿಜೆಪಿಯು ಧರ್ಮ-ಜಾತಿ ಗುರುತಿಸಿ ಹೊಡೆಯಿರಿ, ಕಡಿಯಿರಿ ಎಂದು ಹೇಳುತ್ತದೆ. ಬಿಜೆಪಿ ಎಂದರೆ ಬೆಂಕಿ ಜಗಳ ಪಾರ್ಟಿ, ಬಡವರ ಮನೆ ಸುಡುವುದು ವಿಧಾನಸಭೆಯಲ್ಲಿ ಆಡಳಿತ ನಡೆಸುವುದೇ ಅವರ ಅಜೆಂಡಾ ಎಂದು ಕಿಡಿಕಾರಿದರು.
ಈ ದೇಶದ ಇತಿಹಾಸದಲ್ಲೇ ಶೇ 40ರಷ್ಟು ಕಮಿಷನ್ ಹೊಡೆಯುತ್ತಿರುವ ಸರ್ಕಾರ ಇದು. ಗುತ್ತಿಗೆದಾರರು ಪತ್ರ ಬರೆದರೆ ಮೋದಿ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಗೊತ್ತಾಗಲಿದೆ ಅವರಿಗೂ ಶೇ 25ರಷ್ಟು ಹೋಗುತ್ತಿರುವುದರಿಂದ ಇಲ್ಲಿನವರಿಗೆ ಪ್ರಧಾನಿ ಯಾವುದೇ ಕಡಿವಾಣ ಹಾಕಿಲ್ಲ ಎಂದು ಆರೋಪಿಸಿದರು.
ನಾವು ಏನು ಊಟ ಮಾಡಬೇಕು, ಯಾವ ಬಟ್ಟೆ ಹಾಕೋಬೇಕು, ಯಾವ ಭಾಷೆ ಮಾತನಾಡಬೇಕು ಎಂಬುದನ್ನು ಬಿಜೆಪಿಯವರನ್ನು ಕೇಳಿಕೊಂಡು ಮಾಡಬೇಕಿದೆ. ಕೊನೆಗೆ ನಾವು ಯಾರನ್ನು ಪ್ರೀತಿಸಬೇಕೆಂಬುದನ್ನು ಅವರನ್ನೇ ಕೇಳಬೇಕಿದೆ. ಪ್ರೀತಿಸಲು ಬಿಜೆಪಿಯವರಿಗೆ ಅರ್ಜಿ ಹಾಕಬೇಕು, ಇಲ್ಲದಿದ್ದರೇ ಖಡ್ಗ, ತ್ರಿಶೂಲ ಹಿಡಿದು ಬರುತ್ತಾರೆ. ನಮ್ಮ ಓಟು ಹಾಕಿ ಇವರನ್ನೇ ಎಲ್ಲದಕ್ಕೂ ಕೇಳಬೇಕಾದ ಗ್ರಹಚಾರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಪೇಪರ್ ಸಿಂಹ: ಕಾಂಗ್ರೆಸ್ ನಾಯಕರಿಂದ ಯಾವಾಗಲೂ ಸಮಾಜವನ್ನು ಒಗ್ಗೂಡಿಸುವ ಮಾತುಗಳನ್ನು ಕೇಳಿರುತ್ತೀರಿ. ಸಾಮರಸ್ಯದ ಹೇಳಿಕೆಗಳನ್ನು ಓದಿರುತ್ತೀರಿ. ಆದರೆ, ಪಕ್ಕದ ಜಿಲ್ಲೆಯಾದ ಮೈಸೂರಿನಲ್ಲಿ ಒಬ್ಬರು ಪೇಪರ್ ಸಿಂಹ ಇದ್ದಾರೆ. ಹೆಸರಿಗೆ ಸಿಂಹ ಆದರೆ ಬಾಯಿ ಬಿಟ್ಟರೇ ವಿಷ. ಸುಳ್ಳು ಹೇಳೋದು, ವಿಷ ಬೀಜ ಬಿತ್ತುವುದೇ ಅವರ ಉದ್ಯೋಗ ಎಂದು ಕಿಡಿಕಾರಿದರು.
ಬಿಜೆಪಿಯವರು ಮೂಢನಂಬಿಕೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದಲೇ, ಯಡಿಯೂರಪ್ಪ ಸಿಎಂ ಆಗಿದ್ದಾಗ ಒಮ್ಮೆಯೂ ಚಾಮರಾಜನಗರಕ್ಕೆ ಬರಲಿಲ್ಲ. ಆದರೂ ಒಮ್ಮೆಯೂ ಪೂರ್ಣಾವಧಿ ಪೂರೈಸಲಿಲ್ಲ. ಬೊಮ್ಮಾಯಿ ಅವರು ಅಷ್ಟೇ ಚಾಮರಾಜನಗರಕ್ಕೆ ಬಂದು ಅಭಿವೃದ್ಧಿ ಕಾರ್ಯ ಕೈಗೊಳ್ಳದಿದ್ದರೇ ಇವರು ಎರಡು - ಮೂರು ತಿಂಗಳಿಗೇ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ವ್ಯಂಗ್ಯವಾಡಿದರು.
ಸಂವಿಧಾನದ ಪರವಾಗಿ ನಾವು ನಿಂತಿದ್ದೇವೆ. ಸಂವಿಧಾನದ ವಿರುದ್ಧವಾಗಿ ಬಿಜೆಪಿ ಹಾಗೂ ಸಂಘ ಪರಿವಾರ ನಿಂತಿದ್ದು, ಅವರಿಗೆ ಅಧಿಕಾರ ಇರಲಿ, ಇರದಿರಲಿ ಸಂವಿಧಾನಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದು, ಸಂವಿಧಾನ ಉಳಿಸಲು ಕಾಂಗ್ರೆಸ್ ಹೋರಾಡುತ್ತಿದೆ ಎಂದರು.
ಬಿಜೆಪಿ ವಿಭಜನೆ ಸೂತ್ರ ಅನುಸರಿಸುತ್ತಿದೆ
ಯುವ ಕಾಂಗ್ರೆಸ್ ಮೂಲಕ ನಾವು ದೇಶ ಕಟ್ಟುತ್ತಿದ್ದರೆ ಬಿಜೆಪಿ ವಿಭಜನೆ ಸೂತ್ರ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಕಿಡಿಕಾರಿದರು.
ನಗರದ ಬಿ. ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಯುವ ಶಕ್ತಿ ನವದೃಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿಯು ಧರ್ಮ - ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿದ್ದು, ತ್ರಿಶೂಲಗಳನ್ನು ವಿತರಿಸುತ್ತಿದೆ. ಬಿಜೆಪಿಯಿಂದ ಭಾರತ ನಿರ್ಮಾಣ ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಯುವಕರನ್ನು ಸಶಕ್ತರನ್ನಾಗಿಸಿ ಪ್ರಗತಿಯತ್ತ ಕೊಂಡೊಯ್ಯಲಿದೆ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕೊರೊನಾ ಕಾಲದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಮ್ಲಜನಕ ದುರಂತವನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಮಾಧ್ಯಮಗಳು, ಯುವ ಕಾಂಗ್ರೆಸ್ನಿಂದಾಗಿ ಸರ್ಕಾರದ ವೈಫಲ್ಯ ಬಹಿರಂಗವಾಯಿತು ಎಂದು ವಾಗ್ದಾಳಿ ನಡೆಸಿದರು.
ಶಿಸ್ತಿನ ಪಾಠ: ಕಾರ್ಯಕ್ರಮದುದ್ದಕ್ಕೂ ಯುವ ಕೈ ಕಾರ್ಯಕರ್ತರು ಶಿಳ್ಳೆ, ಕಿರುಚಾಡುವುದು ಮಾಡಿದ್ದರಿಂದ ಅಸಮಾಧಾನಗೊಂಡ ಧ್ರುವನಾರಾಯಣ ಅವರು, ಮೊದಲು ಎಲ್ಲರೂ ಶಿಸ್ತು ಕಲಿಯಬೇಕು. ಜನಪರ ವಿಚಾರಗಳನ್ನು ಇಟ್ಟುಕೊಂಡು ಯುವ ಕಾಂಗ್ರೆಸ್ ಕಾರ್ಯಕರ್ತರು ಹೋರಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.
ಓದಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ