ಚಾಮರಾಜನಗರ: ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಆಸೆಯಂತೆ ಡಾ.ರಾಜ್‍ಕುಮಾರ್ ಅವರು ಹುಟ್ಟಿದ ಮನೆ ಮ್ಯೂಸಿಯಂ ಆಗಲಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.
ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಸಮೀಪವಿರುವ ಗಾಜನೂರಿನಲ್ಲಿರುವ ಡಾ.ರಾಜ್ಕುಮಾರ ಆಡಿ ಬೆಳೆದ ಮನೆಗೆ ಕಳೆದ ಮೂರುವರೆ ತಿಂಗಳ ಹಿಂದೆಯಷ್ಟೇ ನಟ ಪುನೀತ್ ಭೇಟಿ ನೀಡಿದ್ದರು. ಕುಸಿಯುವ ಸ್ಥಿತಿಯಲ್ಲಿದ್ದ ಈ ಹಳೆ ಮನೆ ಕಂಡು ದುರಸ್ತಿ ಮಾಡಿಸಿ ಮ್ಯೂಸಿಯಂ ಮಾಡುವ ಆಸೆಯನ್ನು ಹೊರಹಾಕಿದ್ದರು. ಆದರೆ, ಅಕಾಲಿಕವಾಗಿ ನಿಧನ ಹೊಂದಿದ್ದಾರೆ.

ಈಗ ರಾಜ್ ಕುಟುಂಬ ಅಪ್ಪು ಆಸೆ ಈಡೇರಿಸಲು ಮುಂದಾಗಿದ್ದು, ಹಳೇ ಮನೆಯ ದುರಸ್ತಿ ಕಾರ್ಯ ಮಾಡಿಸುತ್ತಿದ್ದಾರೆ. ದುರಸ್ತಿ ಕಾರ್ಯ ಮುಗಿದ ನಂತರ ಮನೆ ವೀಕ್ಷಣೆಗೆ ಶಿವಣ್ಣ, ರಾಘಣ್ಣ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಡಾ.ರಾಜ್, ಪುನೀತ್ಗೆ ಸಂಬಂಧಿಸಿದ ಫೋಟೋ ಇಟ್ಟು ಮ್ಯೂಸಿಯಂ ಮಾಡಲು ನಿರ್ಧರಿಸಲಾಗಿದೆ ಎಂದು ಅಣ್ಣಾವ್ರ ಸಂಬಂಧಿ ಗೋಪಾಲ್ ತಿಳಿಸಿದ್ದಾರೆ
ಡಾ.ರಾಜ್, ಪುನೀತ್ ನೆನಪು ಶಾಶ್ವತವಾಗಿ ಉಳಿಯಲು ಈ ಮ್ಯೂಸಿಯಂ ಸ್ಥಾಪನೆಯಾಗುತ್ತಿದ್ದು, ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Watch.. ಮತ್ತೆ ಯಾವತ್ತೂ ಈ ಹಾಡು ಹಾಡುವುದಿಲ್ಲ... ಅಪ್ಪು ನೆನೆದು ಎನ್ಟಿಆರ್ ಭಾವುಕ