ಚಾಮರಾಜನಗರ: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇಂದು ಚಾಮರಾಜನಗರದಲ್ಲಿ ಜೋರು ಮಳೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದರು. ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ ಆದ್ದರಿಂದ ಅವರಿಗೆ ಈ ಚುನಾವಣೆಯಲ್ಲಿ 40 ಸ್ಥಾನಗಳನ್ನು ಮಾತ್ರ ಕೊಡಿ, ನಮಗೆ 150 ಸ್ಥಾನ ಕೊಡಿ, ಅಲ್ಪ ಬಹುಮತದ ಸರ್ಕಾರ ಬಂದರೆ 40 ಪರ್ಸೆಂಟ್ ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಚುನಾವಣೆಯಲ್ಲ, ಕರ್ನಾಟಕದ ಯುವ ಸಮುದಾಯ, ಮಕ್ಕಳು, ಮಹಿಳೆಯರು, ರೈತರ ಚುನಾವಣೆ. 40 ಪರ್ಸೆಂಟ್ ಬಗ್ಗೆ ಇದುವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಕಾರ ಎತ್ತಿಲ್ಲ, ಯಾವುದೇ ತನಿಖೆ ಕೂಡ ಆಗಿಲ್ಲ, ಕರ್ನಾಟಕ ಜನರಿಗೆ 40 ಪರ್ಸೆಂಟ್ ಸರ್ಕಾರದ ಬಗ್ಗೆ ತಿಳಿಯಲಿ, ಇದರ ಬಗ್ಗೆಯೂ ಮಾತನಾಡಿ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ಮೋದಿ ತಮ್ಮ ಬಗ್ಗೆ ಮಾತನಾಡುವುದು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಅವರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ, ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ಬಗ್ಗೆ ಮಾತಾಡುವುದನ್ನು ಆರಂಭಿಸಿ. ಚುನಾವಣಾ ಅರ್ಧ ಪ್ರಚಾರ ಮುಗಿಯುತ್ತಿದೆ, ಈಗಲಾದರೂ ಕರ್ನಾಟಕದ ಬಗ್ಗೆ ಮಾತನಾಡಿ ಎಂದು ವಾಗ್ದಾಳಿ ನಡೆಸಿದರು. ನಾನು ನಮ್ಮ ಪಕ್ಷದ ಎಲ್ಲಾ ನಾಯಕರನ್ನು ಗೌರವಿಸುತ್ತೇನೆ, ಆದರಿಸುತ್ತೇನೆ. ಮೋದಿ ಅವರೇ ನೀವೇಕೆ ನಿಮ್ಮ ಪಕ್ಷದ ನಾಯಕರಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹೆಸರನ್ನೂ ಏಕೆ ತೆಗೆದುಕೊಳ್ಳುವುದಿಲ್ಲ, 40 ಪರ್ಸೆಂಟ್ ಪರಿಣಾಮ, ನಿಮ್ಮ ನಾಯಕರು ಎಷ್ಟು ಭ್ರಷ್ಟರು ಅದಕ್ಕಾ..? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನನ್ನನ್ನು ಇಷ್ಟು ಬಾರಿ ನಿಂದಿಸಿದೆ ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ನಿಮ್ಮ ಬಗ್ಗೆ ಮಾತಾಡುವುದನ್ನು ಕಡಿಮೆ ಮಾಡಿ, ಜನರ ಬಗ್ಗೆ ಮಾತನಾಡಿ ಎಂದು ರಾಹುಲ್ ಗಾಂಧಿ ವ್ಯಂಗ್ಯ ವಾಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಮಂಜೂರು ಮಾಡುತ್ತೇವೆ, ನೀವು ಏನು ಮಾಡುತ್ತೀರಾ ಈಗಲಾದರೂ ಹೇಳಿ..? ನಮ್ಮ ಸರ್ಕಾರ ಬಂದ ಬಳಿಕ ಬಿಜೆಪಿ ಲೂಟಿ ಮಾಡಿರುವ ಹಣವನ್ನು ಜನರಿಗೇ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಈಗಿರುವ ಬಿಜೆಪಿ ಸರ್ಕಾರ ಪ್ರಜಾತಂತ್ರದ ಸರ್ಕಾರವಲ್ಲ, ಕಳ್ಳತನದಿಂದ ಹಿಡಿದಿರುವ ಸರ್ಕಾರ, ಖರೀದಿ ಮಾಡಿರುವ ಸರ್ಕಾರ, ಲೂಟಿ ಮಾಡಿರುವ ಸರ್ಕಾರ, ನಮಗೆ ಜನರ ಭವಿಷ್ಯವನ್ನು ಉತ್ತಮಗೊಳಿಸುವ ಆಸೆ ಇದೆ ಎಂದು ಹೇಳಿದರು. ಮಳೆಯಿಂದಾಗಿ ಕಾರ್ಯಕ್ರಮ 2 ಗಂಟೆ ತಡವಾಗಿ ಆರಂಭಗೊಂಡು 20 ನಿಮಿಷದಲ್ಲಿ ಮುಗಿಯಿತು. 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಮಳೆ ನಡುವೆಯೂ ಕಾದಿದ್ದರು.
ಇದನ್ನೂ ಓದಿ: ಉಚಿತ ಭರವಸೆ ಮೂಲಕ ಬಿಜೆಪಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ: ಸಿದ್ದರಾಮಯ್ಯ