ಚಾಮರಾಜನಗರ: ಕ್ಷೇತ್ರಕ್ಕಾಗಿ ಪರದಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷೇತ್ರ ಹುಡುಕಿ ಕೊಡಬೇಕಿದೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಟೀಕಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಈ ರಾಜ್ಯದ ಹಿರಿಯ ರಾಜಕಾರಣಿ- ಸಚಿವ, ಡಿಸಿಎಂ, ಸಿಎಂ ಈಗ ವಿಪಕ್ಷ ನಾಯಕರಾಗಿದ್ದಾರೆ. ಅವರಿಗೇ ನಿಲ್ಲಲು ಒಂದು ಕ್ಷೇತ್ರ ಇಲ್ಲದಿರುವುದು, ಹೇಳೋದಿಕ್ಕೆ ನಾಚಿಕೆ ಆಗುತ್ತಿದೆ. ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರಿಲ್ಲ, ಎರಡು ದಿನ ಬಿಟ್ಟು ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ. ಕ್ಷೇತ್ರಕ್ಕಾಗಿ ಪರದಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಕ್ಷೇತ್ರ ಹುಡುಕಿ ಕೊಡಬೇಕಿದೆ ಎಂದು ಲೇವಡಿ ಮಾಡಿದರು.
ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗುಟುಕು ನೀರಿನಿಂದ ಗೆದ್ದಿದ್ದಾರೆ. ಸಿದ್ದರಾಮಯ್ಯಗೆ ಜನರ ಮೇಲೆ ನಂಬಿಕೆ ಇಲ್ಲವೇ, ಮತದಾರರ ಮೇಲೆ ನಂಬಿಕೆ ಇಲ್ಲವೇ, ಬನ್ನಿ ಮೈಸೂರು ಜಿಲ್ಲೆಗೆ, ಜನರ ಮೇಲೆ ಸಿದ್ದರಾಮಯ್ಯ ಅವರು ನಂಬಿಕೆ ಇಟ್ಟಿಲ್ಲ, ಇನ್ನು ಅವರ ಪಾರ್ಟಿ ಮೇಲೆ ಜನರು ನಂಬಿಕೆ ಇಡುತ್ತಾರೆಯೇ ಎಂದು ಕಿಡಿಕಾರಿದರು. ಸಚಿವ ಸೋಮಣ್ಣ ಪಕ್ಷ ಬಿಡುತ್ತಿಲ್ಲ, ಹೈಕಮಾಂಡ್ ಜೊತೆ ಎಲ್ಲಾ ಮಾತನಾಡಿದ್ದಾರೆ. ಅವರಿಗೆ ಚಾಮರಾಜನಗರ ಚುನಾವಣಾ ಉಸ್ತುವಾರಿ ಕೊಟ್ಟಿದ್ದಾರೆ. ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಇನ್ನು ಇದೇ ವೇಳೆ, ಚಾಮರಾಜನಗರ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರುವುದು, ಅಸಮಾಧಾನ ಮುಗಿದ ಅಧ್ಯಾಯ- ಸಚಿವ ಸೋಮಣ್ಣ ಸ್ಪಷ್ಟನೆ: ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ ಎಂದು ಮಾ. 27ಕ್ಕೆ ಸಚಿವ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಪೋಸ್ಟ್ ಹರಿದಾಡುತ್ತಿರುವ ಬಗ್ಗೆ ವಸತಿ ಇಲಾಖೆ ಸಚಿವ ಸೋಮಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳಿನಿಂದ ನನ್ನನ್ನು ಉಜ್ಜುತ್ತಿದ್ದೀರಾ, ಇನ್ನು ಎಷ್ಟು ಬೇಕಾದ್ರೂ ಹಾಕಿಕೊಳ್ಳಿ, ಅವೆಲ್ಲಾ ನನ್ನ ತಲೆಯಲ್ಲೇ ಇಲ್ಲಾ. ನಾನೋರ್ವ ಡೈರೆಕ್ಟ್ ರಾಜಕಾರಣಿ, ನೇರವಾಗಿ ಮಾತನಾಡುವವನು. ಈಗಾಗಲೇ ತನ್ನ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿರುವ ಕುರಿತು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೇಲಿನ ಅಸಮಾಧಾನ, ಕಾಂಗ್ರೆಸ್ ಸೇರುವುದರ ಕುರಿತು ಎಲ್ಲದರ ಬಗ್ಗೆ ಹೇಳುವುದನ್ನೆಲ್ಲಾ ಹೇಳಿದ್ದೇನೆ. ಅವೆಲ್ಲಾ ಮುಗಿದ ಅಧ್ಯಾಯ. ಈ ವಿಚಾರಗಳ ಕುರಿತು ನಾನು ಉತ್ತರಿಸಲ್ಲ ಎಂದು ಸ್ಪಷ್ಟಪಡಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜ್ಯದ 224 ಕ್ಷೇತ್ರಗಳಲ್ಲಿ ಸೋಮಣ್ಣಗೆ ಹಲವಾರು ಕ್ಷೇತ್ರಗಳ ಪರಿಚಯ ಇದೆ. ಚಿಕ್ಕಂದಿನಿಂದಲೂ ಚಾಮರಾಜನಗರ ಕ್ಷೇತ್ರದ ಬಗ್ಗೆ ವಿಶೇಷ ಪ್ರೀತಿ ಅಷ್ಟೇ. ಎಲ್ಲವೂ ಪಾರ್ಟಿಯ ತೀರ್ಮಾನ ಎಂದರು.
ಇದನ್ನೂ ಓದಿ: ಬಿಎಸ್ವೈ ನಮ್ಮ ಪ್ರಶ್ನಾತೀತ ನಾಯಕ, ಗೊಂದಲ ಪರಿಹಾರವಾಗಿದೆ: ಸಚಿವ ಸೋಮಣ್ಣ