ಚಾಮರಾಜನಗರ: ಅಣ್ಣಾವ್ರ ಗಾಜನೂರು ಮನೆಯಲ್ಲಿ ಇದೇ ಮೊದಲ ಬಾರಿಗೆ ಚಿತ್ರವೊಂದು ಸೆಟ್ಟೇರಿದ್ದು, ಡಾ.ರಾಜ್‍ಕುಮಾರ್ ಸಹೋದರಿ ನಾಗಮ್ಮ ಅವರೇ ಮುಹೂರ್ತ ಪೂಜೆ ನೆರವೇರಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಖಡಕ್ ಹಳ್ಳಿ ಹುಡುಗರು ಎಂಬ ಚಿತ್ರಕ್ಕೆ ಗುರುವಾರ ಅಣ್ಣಾವ್ರ ಮನೆಯಲ್ಲಿ ಚಾಲನೆ ಸಿಕ್ಕಿದೆ. ರಾಘಣ್ಣ ದಂಪತಿ ಮತ್ತು ಸಹೋದರಿ ನಾಗಮ್ಮ ಕುಟುಂಬ ಪೂಜೆಯಲ್ಲಿ ಪಾಲ್ಗೊಂಡಿತ್ತು.
ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ ಆಗಿತ್ತು. ಆದರೆ, ಯಾವುದೇ ಚಿತ್ರದ ಮೂಹೂರ್ತ ಆಗಿರಲಿಲ್ಲ, ಹೀಗಾಗಿ ಪ್ರಥಮ ಬಾರಿಗೆ ಗಾಜನೂರಿನಲ್ಲೇ ಮೂಹೂರ್ತ ನಡೆಸುವ ಮೂಲಕ ಗಮನ ಸೆಳೆದಿದೆ. ರಾಜ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದ್ದು, ಕನ್ನಡಕ್ಕೆ ಮೊದಲ ಗೌರವ ಎಂಬ ಹಾಡಿನ ಚಿತ್ರೀಕರಣವೂ ಗಾಜನೂರಲ್ಲೇ ನಡೆಯಲಿದೆ ಎಂದು ತಿಳಿದುಬಂದಿದೆ.
ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ.ಯು.ಪ್ರಸನ್ನ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ರಾಜಕುಮಾರ್ ಅವರ ತಂಗಿ ಮಗನಾದ ಗೋಪಾಲ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರದ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಯಿತು. ಚಿತ್ರದ ವಿಶೇಷವೆಂದರೆ ಕನ್ನಡಾಭಿಮಾನದ ಹಾಡನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ತಾರಾ ಬಳಗದಲ್ಲಿ ರಾಜೇಶ್ ರಾಥೋಡ್, ಪ್ರಭಾಸ್ ರಾಜ್, ಮಜಾಭಾರತ ಚಂದ್ರಪ್ರಭಾ, ದೀಪು ವಿಜಯ್, ವರದರಾಜ್, ಉದಯ್, ಮಹಂತೇಶ್, ಆರ್.ಎಂ.ಮಂಜು ಅಭಿನಯಿಸಿದ್ದಾರೆ.
(ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ: ಅಚ್ಚರಿಯಾದ್ರೂ ಇದು ಸತ್ಯ.. ನೋಟಾಗೆ ಗುದ್ದಿದ ಸುಮಾರು ಎಂಟು ಲಕ್ಷ ಮಂದಿ!)