ಕೊಳ್ಳೇಗಾಲ (ಚಾಮರಾಜನಗರ): 2003ರ ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣ ನಡೆಯು ಕಾರ್ಮಿಕ, ರೈತ ಹಾಗೂ ಗ್ರಾಹಕರ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ತಿದ್ದುಪಡಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಸೆಸ್ಕಾಂ ನೌಕರರು ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗ ಸೇರಿದ ನೂರಾರು ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿದ್ಯುತ್ ಕಾಯ್ದೆ ತಿದ್ದುಪಡಿ, ಖಾಸಗೀಕರಣ ನಡೆಯನ್ನು ವಿರೋಧಿಸಿ ಘೋಷಣೆ ಕೂಗುವ ಮೂಲಕ ಖಂಡಿಸಿದರು.
ನೌಕರರ ಸಂಘದ ಅಧ್ಯಕ್ಷ ಮಹದೇವ ಮಾತನಾಡಿ, ಕೇಂದ್ರ ಸರ್ಕಾರದ ಖಾಸಗೀಕರಣದ ನಡೆಯನ್ನು ರಾಜ್ಯದ ವಿದ್ಯುತ್ ನೌಕರರ ವರ್ಗ ಮತ್ತು ಅಧಿಕಾರಿ ವರ್ಗ ತೀವ್ರವಾಗಿ ಖಂಡಿಸುತ್ತದೆ. ನಾವು 58 ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಹಾಗಿದ್ದರೂ ಏಕೆ ಖಾಸಗೀಕರಣ ಹಾಗೂ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರಗಳು ಜನ ವಿರೋಧಿ ನೀತಿಯನ್ನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.