ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಜನತೆಯ ಬಹು ವರ್ಷದ ಕನಸಾದ ಸುಸಜ್ಜಿತ ಬಸ್ ನಿಲ್ದಾಣದ ಉದ್ಘಾಟನೆ ವೇಳೆ ಬಿಜೆಪಿ ಕೆಲ ಸದಸ್ಯರು ಸೇರಿದಂತೆ ನಗರಸಭೆ ಸದಸ್ಯರು ಶಾಸಕ ಎನ್.ಮಹೇಶ್ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಕೊಳ್ಳೇಗಾಲದಲ್ಲಿ ಕಳೆದ ಐದೂವರೆ ವರ್ಷಗಳಿಂದ ನಡೆಯುತ್ತಿದ್ದ ಹೈಟೆಕ್ ಬಸ್ ನಿಲ್ದಾಣವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಿದ್ದು, ಕಾಮಗಾರಿ ಅಪೂರ್ಣವಾಗಿದ್ದರೂ ಉದ್ಘಾಟನಾ ಭಾಗ್ಯ ಕರುಣಿಸಿದ್ದಾರೆ ಎಂಬುದು ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಸದಸ್ಯರ ಆರೋಪವಾಗಿದೆ.
ಈ ವಿಚಾರವಾಗಿ ಮಾತನಾಡಿದ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ, ನಗರಸಭೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗು ಸಭೆಗೂ ಕರೆಯದೇ ಏಕಪಕ್ಷೀಯವಾಗಿ ಶಾಸಕ ಎನ್.ಮಹೇಶ್ ನಿರ್ಧಾರ ತೆಗೆದುಕೊಂಡು ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸುತ್ತಿದ್ದಾರೆ. ಯುಜಿಡಿ, ಶೌಚಾಲಯ ವ್ಯವಸ್ಥೆ ಇನ್ನೂ ಆಗಿಲ್ಲ. ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ಎಲ್ಲಿಗೆ ತೆರಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ನಗರಸಭೆಯಿಂದ ಮತ್ತೊಮ್ಮೆ ಉದ್ಘಾಟನೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು, ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದವರನ್ನು ಸಮಾಧಾನ ಪಡಿಸಲು ಸಚಿವ ಸೋಮಣ್ಣ ಮುಂದಾದ ವೇಳೆ ಆರೋಪಗಳ ಸುರಿಮಳೆಗೈದ ಸದಸ್ಯರು, ನಿಮ್ಮಲ್ಲಿರುವ ಸೌಜನ್ಯವೂ ಅವರಿಗಿಲ್ಲ. ಅನುದಾನಕ್ಕೆ ನಗರಸಭೆ ಬೇಕು, ಉದ್ಘಾಟನೆಗೆ ನಗರಸಭೆ ಬೇಡವೇ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು. ಈ ವೇಳೆ ನಗರಸಭೆ ಸದಸ್ಯರ ವಿರೋಧದ ನಡುವೆಯೂ ಕೊಳ್ಳೇಗಾಲ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಆಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ನಾಲ್ವರು ಸದಸ್ಯರು, ಬಿಎಸ್ಪಿಯ ಇಬ್ಬರು, ಕಾಂಗ್ರೆಸ್‌ನ 12 ಹಾಗೂ ಪಕ್ಷೇತರ ನಾಲ್ವರು ಸದಸ್ಯರು ಭಾಗಿಯಾಗಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.
ಹೈಟೆಕ್ ಬಸ್ ನಿಲ್ದಾಣ ಬಹುವರ್ಷದ ಬೇಡಿಕೆ : ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ₹22.10 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣದ ಯೋಜನೆ ರೂಪಿಸಿತ್ತು. 2017ರ ಡಿಸೆಂಬರ್‌ನಲ್ಲಿ ಅಂದಿನ ಶಾಸಕ ಕಾಂಗ್ರೆಸ್‌ನ ಎಸ್.ಜಯಣ್ಣ ಭೂಮಿಪೂಜೆ ನೆರವೇರಿಸಿದ್ದರು. ನಗರದಲ್ಲಿ ಹಳೆಯ ಬಸ್ ನಿಲ್ದಾಣ 2.13 ಎಕರೆ ಜಾಗದಲ್ಲಿತ್ತು. ಕೆಎಸ್‌ಆರ್‌ಟಿಸಿ ಜೊತೆ ಖಾಸಗಿ ಬಸ್‌ಗಳ ಪ್ರವೇಶಕ್ಕೂ ಅವಕಾಶ ಇತ್ತು.
ಬಳಿಕ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಂಡ ನಂತರ ಖಾಸಗಿ ಬಸ್‌ಗಳ ನಿಲುಗಡೆಗೆ 73 ಸೆಂಟ್ಸ್ ಜಾಗ ಬಿಟ್ಟುಕೊಡುವುದಾಗಿ ಮಾತಾಗಿತ್ತು. ಉಳಿದ 1.40 ಎಕರೆಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಹಳೆಯ ಬಸ್ ನಿಲ್ದಾಣದಲ್ಲಿ 51 ಅಂಗಡಿಗಳಿದ್ದವು. ಆ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಇದೆ. ಆ ಅಂಗಡಿಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಮೂರು ಅಂಗಡಿಯವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಹಾಗಾಗಿ, ಆ ಭಾಗ ಹಾಗೆಯೇ ಬಿದ್ದಿದೆ.
ಇನ್ನು ನೂತನವಾಗಿ ಉದ್ಘಾಟನೆ ಆಗಿರುವ ಹೊಸ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಬೈಕ್, ಕಾರು ಪಾರ್ಕಿಂಗ್, ಮೊದಲ ಅಂತಸ್ತಿನಲ್ಲಿ 17 ಅಂಗಡಿಗಳು, ಒಂದು ಹೋಟೆಲ್, ಪೊಲೀಸ್ ಚೌಕಿ, ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಕೊಠಡಿ, ಗಂಡಸರು, ಹೆಂಗಸರು ಹಾಗೂ ಅಂಗವಿಕಲರ ಪ್ರತ್ಯೇಕ ಶೌಚಾಲಯಗಳು, ಎರಡನೇ ಅಂತಸ್ತಿನಲ್ಲಿ 12 ಅಂಗಡಿ ಹಾಗೂ ಒಂದು ಹಾಲ್, ಮೂರನೇ ಅಂತಸ್ತಿನಲ್ಲಿ ದೊಡ್ಡ ಹಾಲ್ ಇದ್ದು, ಲಿಫ್ಟ್ ಸೌಲಭ್ಯ ವ್ಯವಸ್ಥೆಯನ್ನು ಸಹಾ ಕಲ್ಪಿಸಲಾಗಿದೆ.
ಇದನ್ನೂ ಓದಿ :ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕ್ಷೇತ್ರ ಹುಡುಕಿ ಕೊಡಬೇಕಿದೆ: ಸಂಸದ ಶ್ರೀನಿವಾಸ ಪ್ರಸಾದ್