ಚಾಮರಾಜನಗರ: ಅಡುಗೆ ಅನಿಲ ದರ ಹಾಗೂ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಇಂದು ನಗರದಲ್ಲಿ ಸೌದೆ ಒಲೆಯ ಮೇಲೆ ಟೀ ತಯಾರಿಸಿ ಆಕ್ರೋಶ ಹೊರಹಾಕಿದರು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಕರ್ನಾಟಕ ಸೇನಾಪಡೆ ಸಂಘಟನೆ ಅಧ್ಯಕ್ಷ ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದವರೆಗೆ ತಲೆಯ ಮೇಲೆ ಖಾಲಿ ಸಿಲಿಂಡರ್ ಹೊತ್ತು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಇಂಧನ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗಿರುವ ಶ್ರೀ ಭವನೇಶ್ವರಿ ವೃತ್ತದಲ್ಲಿ ಕಲ್ಲಿಟ್ಟು ಸೌದೆ ಒಲೆ ಸಿದ್ಧಪಡಿಸಿ, ಅದರ ಮೇಲೆ ಕಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾರ್ವಜನಿಕರಿಗೆ ಉಚಿತ ಟೀ ವಿತರಿಸಿದರು.
ಕೇಂದ್ರ ಸರ್ಕಾರ ಪದೇ ಪದೆ ಅಡುಗೆ ಅನಿಲ ದರ ಹಾಗೂ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಬೆಲೆ ಏರಿಕೆಯಿಂದ ಜನ ಜೀವನ ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆ ನೀತಿಯನ್ನು ಕೈಬಿಟ್ಟು ಜನ ಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.