ಚಾಮರಾಜನಗರ: ತಮಿಳುನಾಡಿನ ಕೊಂಗಳ್ಳಿ ಬೆಟ್ಟದಲ್ಲಿ ಜೂಜು, ಮದ್ಯ ಸೇವನೆ ಮೂಲಕ ಹಲವರು ಮೋಜು-ಮಸ್ತಿ ಮಾಡುತ್ತಿದ್ದು, ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ.
ಈ ಮೊದಲು ದೇಗುಲದ ಆವರಣದಲ್ಲಿ ವಾಸ್ತವ್ಯ ಹೂಡಿದವರು ಜೂಜು, ಮದ್ಯ ಸೇವನೆ ಮಾಡುತ್ತಾರೆಂದು ಸಂಜೆ 6 ಗಂಟೆ ನಂತರ ಬೆಟ್ಟಕ್ಕೆ ಯಾರಿಗೂ ಅವಕಾಶ ನೀಡದಂತೆ ನಿರ್ಬಂಧಿಸಲಾಗಿತ್ತು. ಇದಕ್ಕಾಗಿ ಸತ್ಯಮಂಗಲಂ ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್ ಸಹ ಹಾಕಿದ್ದರು.
ಇದಾದ ಬಳಿಕ ಕೊಂಗಳ್ಳಿ ಬೆಟ್ಟದ ತುಸು ದೂರದ ಗಿರಿಜಮ್ಮನ ತೋಪಿನಲ್ಲಿನರುವ ಸಮುದಾಯ ಭವನ, ಸರ್ಕಾರಿ ಹಾಲ್ಗಳಲ್ಲಿ ಉಳಿದು ಕುಡಿದು ದಾಂಧಲೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಪುಂಡರಿಂದ ಇತರೆ ಭಕ್ತರಿಗೆ ಸಹ ತೊಂದರೆಯಾಗುತ್ತಿದೆ.
ಬೆಟ್ಟದಲ್ಲಿ ಮದ್ಯ ಸೇವನೆ, ಜೂಜು ತಹಬದಿಗೆ ಬಂದಿದ್ದರೂ ತಪ್ಪಲಿನಲ್ಲಿ ಕುಡುಕರ ಕಾಟ ಮೀತಿ ಮೀರಿದೆ. ವಿಪರ್ಯಾಸವೆಂದರೆ ಕರ್ನಾಟಕದ ಬಿಸಲವಾಡಿ ಮತ್ತು ಅರಕಲವಾಡಿ ಬೆಟ್ಟಕ್ಕೆ ಹತ್ತಿರವಿದ್ದು, ಇಲ್ಲಿನ ಮದ್ಯದಂಗಡಿಗಳಿಂದಲೇ ಮದ್ಯಪಾನ ಸರಬರಾಜು ಆಗುತ್ತಿದೆ ಎನ್ನಲಾಗಿದೆ.
ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದನ್ನು ತಡೆಯಲು ಸಂಬಂಧಪಟ್ಟವರು ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.