ಚಾಮರಾಜನಗರ: ಕೊರೊನಾ ಮುಕ್ತ ಗ್ರಾಮ ಮಾಡುವ ಬದಲು ಕೊರೊನಾ ಮುಕ್ತ ಗ್ರಾಪಂ ಮಾಡಿದರೆ ತಾಲೂಕು ಆಡಳಿತದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಘೋಷಣೆ ಮಾಡಿದರು.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ಕೊರೊನಾ ಮುಕ್ತ ಗ್ರಾಪಂ ಆಂದೋಲನದಂತೆ ನಡೆಯಬೇಕಿದೆ. ಕೊರೊನಾ ಮುಕ್ತ ಗ್ರಾಪಂಗಳಿಗೆ ನಗದು ಬಹುಮಾನ ನೀಡಲಾಗುವುದು. ಇನ್ನು ತಾಲೂಕಿನ ಚಿಕ್ಕಾಟಿ, ಹೊರೆಯಾಲ, ನಿಟ್ರೆ, ಕೋಟೆಕೆರೆ ಹಾಗೂ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬೇರೆ ಊರುಗಳಿಂದ ಬಂದಿರುವವರ ವಿವರಗಳನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಿನದಿಂದ ದಿನಕ್ಕೆ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸಬೇಕು. ಜೊತೆಗೆ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸಬೇಕು ಎಂದು ಹೇಳಿದರು.
ಸೋಂಕಿತರ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಜನರು ಸೇರುತ್ತಿರುವುದರಿಂದ ಸೋಂಕು ಸ್ಫೋಟವಾಗಲು ಕಾರಣವಾಗಿದೆ. ಹೀಗಾಗಿ ಅಂತ್ಯಕ್ರಿಯೆಗೆ ಸರ್ಕಾರದ ಕೋವಿಡ್ ನಿಯಮ ಜಾರಿಯಾಗುವಂತೆ ಕ್ರಮ ವಹಿಸಲು ತಹಸೀಲ್ದಾರ್ ರವಿಶಂಕರ್ ಹಾಗೂ ತಾಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್ಗೆ ಸೂಚನೆ ನೀಡಿದರು.