ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಭೇಟಿಗೆ ಕ್ಷಣಗಣನೆ ಆರಂಭವಾಗಿದ್ದು, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಬಂಡೀಪುರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ ಪೊಲೀಸರು ಜಂಟಿಯಾಗಿ ಭದ್ರತೆ ಕೈಗೊಳ್ಳುತ್ತಿದ್ದು, ಅತ್ತ ತಮಿಳುನಾಡಿನ ಮಧುಮಲೈನಲ್ಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆ ಅಂದಾಜು 2 ಸಾವಿರ ಮಂದಿ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.
ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಗುಂಡ್ಲುಪೇಟೆಯ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಯಾವುದೇ ಭದ್ರತಾ ಲೋಪ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದು, ಭಾನುವಾರ ಬೆಳಗ್ಗೆ 7.30 ರ ಸುಮಾರಿಗೆ ಮೋದಿ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿದ್ದಾರೆ. ಅದಾದ ನಂತರ, ಬಂಡೀಪುರದ ಹಳೇ ಸಫಾರಿ ಕೇಂದ್ರದ ಬಳಿ ಅರಣ್ಯ ಸಿಬ್ಬಂದಿ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಸಫಾರಿ ಆರಂಭಿಸಲಿದ್ದಾರೆ.
ಬೊಮ್ಮ- ಬೆಳ್ಳಿ ದಂಪತಿಗೆ ಸನ್ಮಾನ ಮಾಡಲಿರುವ ಪ್ರಧಾನಿ: ಬಂಡೀಪುರ ವಲಯದ ಬೋಳುಗುಡ್ಡಕ್ಕೆ ಭೇಟಿ ಕೊಡಲಿರುವ ಮೋದಿ ಸಫಾರಿ ನಡೆಸಿ, ಬಳಿಕ ಕೆಕ್ಕನಹಳ್ಳ ಭೇಟಿ ನೀಡಿ, ನಂತರ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡಿಗೆ ಭೇಟಿ ಕೊಟ್ಟು ಅಲ್ಲಿ ಆನೆ ಮರಿ ಉಳಿಸಿದ ಹಾಗೂ ಆಸ್ಕರ್ ಪಡೆದ ಎಲಿಫೆಂಟ್ ವಿಸ್ಪರ್ರ್ಸ್ ಸಾಕ್ಷ್ಯಚಿತ್ರದ ಪಾತ್ರಧಾರಿಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಸನ್ಮಾನಿಸಲಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್: ನರೇಂದ್ರ ಮೋದಿ ಅವರ ಸಮೀಪ ಭದ್ರತೆ ಕೈಗೊಳ್ಳುವ ಮತ್ತು ಅವರ ಸಮೀಪ ತೆರಳುವ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನು ಪ್ರಧಾನಿ ಮೋದಿ ಹೆಲಿಪ್ಯಾಡ್ ನಿಂದ ಬಂಡೀಪುರಕ್ಕೆ ತೆರಳುವಾಗ ಯಾವುದೇ ಭದ್ರತಾ ಲೋಪ ಆಗದಿರಲೆಂದು ಎರಡು ಹಂತದಲ್ಲಿ ಬ್ಯಾರಿಕೇಡ್, ಸ್ಟೀಲ್ ಮೆಸ್ ಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಭಾರತದ ಹುಲಿ ಸಂರಕ್ಷಣಾ ಯೋಜನೆಗೆ 50ರ ಸಂಭ್ರಮ: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರುವ ನಿರೀಕ್ಷೆ