ಚಾಮರಾಜನಗರ: ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಮೇಲೆ ಜಾನಪದ ತವರೂರು, ಗಡಿ ಜಿಲ್ಲೆಯಾದ ಚಾಮರಾಜನಗರ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಚುನಾವಣೆ ಪೂರ್ವದಲ್ಲಾದರೂ ಜಿಲ್ಲೆಯ ಜನರಿಗೆ ಸಂತೃಪ್ತಿದಾಯಕ ಬಜೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲಿನವರದ್ದಾಗಿದೆ.
ಅನ್ನದಾತರ ನಿರೀಕ್ಷೆಗಳು: ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ, ಅರಿಶಿಣ ಹಾಗೂ ಟೊಮೆಟೊ, ಸಣ್ಣ ಈರುಳ್ಳಿಯನ್ನು ಬಹುಪಾಲು ಮಂದಿ ರೈತರು ಬೆಳೆಯುತ್ತಿದ್ದು ತಮಿಳುನಾಡು ಮತ್ತು ಮೈಸೂರು ಉತ್ತಮ ಮಾರುಕಟ್ಟೆಗಳಾಗಿವೆ. ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮೆಟೊ, ಬಾಳೆ ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂಬುದು ರೈತರ ಬಹುವರ್ಷಗಳ ಬೇಡಿಕೆ. ಜೊತೆಗೆ, ಹಣ್ಣು-ತರಕಾರಿ ಸಾಗಾಟಕ್ಕೆ ಗ್ರೀನ್ ವೆಹಿಕಲ್ ಮತ್ತು ಕೋಲ್ಡ್ ಸ್ಟೋರೇಜ್ ದೊರಕಿಸಿಕೊಡಬೇಕೆಂಬ ಒತ್ತಾಯವೂ ಇದೆ.
ಮೊದಲು ರೇಷ್ಮೆಗೆ ಜಿಲ್ಲೆ ಹೆಸರುವಾಸಿಯಾಗಿತ್ತು. ಈಗ, ರೇಷ್ಮೆಯನ್ನು ಬೆಳೆಯುವವರೇ ಇಲ್ಲದಂತಾಗಿದೆ. ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆಗಳನ್ನು ತರಬೇಕಿದೆ. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ರೇಷ್ಮೆ ಕಾರ್ಖಾನೆ ಪುನರುಜ್ಜೀವನಗೊಳಿಸುವ ಭರವಸೆ ಇನ್ನೂ ಈಡೇರಿಲ್ಲ. ರೇಷ್ಮೆಯಿಂದ ವಿಮುಖರಾಗಿರುವ ರೈತರಿಗೆ ಉತ್ತೇಜನ ಕೊಡಬೇಕಿದೆ.
ಹೈದರಾಬಾದ್-ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ನಿರೀಕ್ಷೆಯಂತೆ ಅಭಿವೃದ್ಧಿಗೊಳ್ಳುತ್ತಿದೆ. ಅದೇ ರೀತಿ, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡರೂ ವ್ಯಾವಹಾರಿಕ ಸಂಬಂಧ ಗಟ್ಟಿಯಾಗಿದ್ದರೂ ಕನ್ನಡವೇ ಉಸಿರಾಗಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಕೊಡಬೇಕಿದೆ. ಪಕ್ಕದ ಮೈಸೂರು, ಮಂಡ್ಯದ ಗಡಿಗಳನ್ನಷ್ಟೇ ಚಾಮರಾಜನಗರ ಹೊಂದಿದ್ದು ಆ ಜಿಲ್ಲೆಗಳಲ್ಲಾಗುತ್ತಿರುವ ವೇಗದ ಬೆಳವಣಿಗೆ ಚಾಮರಾಜನಗರದಲ್ಲಿಲ್ಲ, ಈಗಲೂ ಪಕ್ಕದ ಜಿಲ್ಲೆಗಳನ್ನೇ ಉದ್ಯೋಗಕ್ಕೆ ಆಶ್ರಯಿಸಬೇಕಿದ್ದು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲಾಭಿವೃದ್ಧಿಗೆ ವೇಗ ಕೊಡಬೇಕಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ-ಉದ್ಯೋಗ ಸೃಷ್ಟಿಗೆ ವರದಾನ: ಚಾಮರಾಜನಗರ ಜಿಲ್ಲೆ ಶೇ. 50-52ರಷ್ಟು ಅರಣ್ಯದಿಂದ ಕೂಡಿರುವ ಸಂಪದ್ಭರಿತ ಜಿಲ್ಲೆ. ಎರಡು ಹುಲಿ ಸಂರಕ್ಷಿತ ಪ್ರದೇಶ, ಎರಡು ವನ್ಯಜೀವಿಧಾಮಗಳನ್ನು ಒಳಗೊಂಡ ರಾಜ್ಯದ ಏಕೈಕ ಜಿಲ್ಲೆಯಾಗಿದೆ. ಮೈಸೂರಿಗೆ ಬರುವ ಲಕ್ಷಾಂತರ ಪ್ರವಾಸಿಗರನ್ನು ಚಾಮರಾಜನಗರಕ್ಕೂ ಕರೆತರುವಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರಮುಖ ಪಾತ್ರ ವಹಿಸಲಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಟ್ಟರೆ ಜಿಲ್ಲೆಗೆ ಅನೂಕೂಲ. ಚಾಮರಾಜನಗರಕ್ಕೆ ಎರಡು ಬಾರಿ ಭೇಟಿ ಕೊಟ್ಟಿರುವ ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪವರ್ ಕೊಡುತ್ತಾರೆಂಬ ನಿರೀಕ್ಷೆ ಇದೆ.
ಬಸ್ ನಿಲ್ದಾಣ ವ್ಯವಸ್ಥೆ, ಪ್ರಾಣಿ ಸಂಘರ್ಷಕ್ಕೆ ತಡೆ: ಜಿಲ್ಲಾಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ರೇಷ್ಮೆ ಇಲಾಖೆಯ ಸ್ಥಳ ಕೊಟ್ಟಿದ್ದರೂ ನಿರ್ಮಾಣ ಕಾರ್ಯ ಆರಂಭವಾಗುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ, ವಿಶೇಷ ಅನುದಾನದ ಮೂಲಕ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಪ್ರತಿ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಸಿಎಂ ಅವರ ಮೇಲಿದೆ. ಇದರ ಜೊತೆ, ಜಿಲ್ಲಾ ಕೇಂದ್ರದಲ್ಲಿ ಒಂದು ಸಂಸ್ಕೃತ ಪಾಠಶಾಲೆ, ಸರ್ಕಾರಿ ಫಾರ್ಮಸಿ ಕಾಲೇಜು ಮಂಜೂರು ಮಾಡಿದರೆ ಉದ್ಯೋಗಕ್ಕೆ ನೆರವಾಗಲಿದೆ ಎಂಬುದು ಜಿಲ್ಲೆ ಜನತೆ ಅಭಿಮತ.
5 ಸಾವಿರ ಕೋಟಿ ಪ್ಯಾಕೇಜ್ಗೆ ವಾಟಾಳ್ ಆಗ್ರಹ: ಜಿಲ್ಲೆಗೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಜಿಲ್ಲೆಗೆ ಕನಿಷ್ಠ 5 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, 50 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಲಡ್ಡು ಪರ್ವತ! ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮಕ್ಕೆ 3.5 ಲಕ್ಷ ಲಡ್ಡು ತಯಾರಿ