ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಕಳಪೆ ತೊಗರಿ ಬೇಳೆ ಜಿಲ್ಲೆಗೆ ಬರುತ್ತಿರುವ ಆರೋಪ ಕೇಳಿಬಂದಿದ್ದು ಗ್ರಾಹಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಲಾಕ್ಡೌನ್ ಅವಧಿಯಲ್ಲೂ ಹುಳು ಹಿಡಿದ ತೊಗರಿ ಬೇಳೆ ಬಂದಿದ್ದು, ಗಮನಕ್ಕೆ ಬಂದ ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎನ್.ಗೋಪಾಲಯ್ಯ ಕಳಪೆ ಬೇಳೆಯನ್ನು ವಾಪಸ್ ಕಳುಹಿಸಿ ಗುಣಮಟ್ಟದ ಪಡಿತರ ಪೂರೈಕೆಗೆ ಕ್ರಮ ಕೈಗೊಂಡಿದ್ದರು. ಆದರೆ, ಮತ್ತೆ ಈ ತಿಂಗಳು ಚಾಮರಾಜನಗರ ಜಿಲ್ಲಾಕೇಂದ್ರ ವ್ಯಾಪ್ತಿಯಲ್ಲಿ ಕಳಪೆ ತೊಗರಿ ಬೇಳೆ ಪೂರೈಕೆಯಾಗಿದೆ.

ಹುಳು ಹಿಡಿದ, ಸಿಪ್ಪೆ ತೆಗೆಯಗಿರುವ ಹಾಗೂ ತೂತು ಬಿದ್ದಿರುವ ತೊಗರಿ ವಿತರಣೆ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದಲೂ ಇದೇ ರೀತಿಯಾಗಿದೆ. ಸರ್ಕಾರ ನಮಗೆ ಉಚಿತವಾಗಿ ಕೊಡುತ್ತಿದೆ. ಆದರೆ, ಸರ್ಕಾರವೇನೂ ಪುಕ್ಕಟೆಯಾಗಿ ಖರೀದಿಸುತ್ತಿಲ್ಲ. ನಮಗೆ ನೀಡುತ್ತಿರುವ ಬೇಳೆ ಅಂಗಡಿಯಲ್ಲಿ ಕೆಜಿಗೆ 30-40 ರೂ.ಗೆ ಸಿಗುತ್ತಿದೆ ಎಂದು ನಾಯಕರ ಬೀದಿಯ ಸ್ವಾಮಿ ಆಕ್ರೋಶ ಹೊರಹಾಕಿದರು.
ಇದೇ ರೀತಿ ಕಳಪೆ ಪಡಿತರ ವಿತರಣೆ ಮುಂದುವರೆದರೆ ಮುಂದಿನ ತಿಂಗಳು ಸಂಘ-ಸಂಸ್ಥೆಗಳೊಂದಿಗೆ ಸೇರಿ ಉಗ್ರ ಹೋರಾಟ ನಡೆಸುತ್ತೇವೆ. ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಪಡಿತರದ ಗುಣಮಟ್ಟ ತಿಳಿಯಲು ಅಧಿಕಾರಿಗಳಿದ್ದಾರೆ. ಆದರೆ, ಅವರು ಯಾವ ಕೆಲಸವೂ ಮಾಡುತ್ತಿಲ್ಲ. ನಮಗೆ ಕಳಪೆ ಪಡಿತರ ಪೂರೈಕೆಯಾಗುವುದು ನಿಂತಿಲ್ಲ ಎಂದು ನಗರದ ಬಾಲರಾಜು ಕಿಡಿಕಾರಿದರು.
ಈ ಕುರಿತು, ಈಟಿವಿ ಭಾರತಕ್ಕೆ ಆಹಾರ ಇಲಾಖೆ ಉಪನಿರ್ದೇಶಕ ರವಿ ಪ್ರತಿಕ್ರಿಯಿಸಿ, ಕಳಪೆ ತೊಗರಿ ಬೇಳೆ ಪೂರೈಕೆಯಾಗಿದೆ ಎಂದು ಗ್ರಾಹಕರು ದೂರಿದ ಹಿನ್ನೆಲೆಯಲ್ಲಿ 112 ಕ್ವಿಂಟಾಲ್ ಬೇಳೆಯನ್ನು ವಾಪಸ್ ಕಳುಹಿಸಲಾಗಿದೆ. ಗುಣಮಟ್ಟದ ಪಡಿತರ ಬಂದ ಬಳಿಕ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ತಿಂಗಳು ಆಹಾರ ಸಚಿವರು ಬಂದಿದ್ದ ವೇಳೆ ಇದೇ ರೀತಿ ಕಳಪೆ ಪಡಿತರ ಪೂರೈಸಿದರೆ ಪೂರೈಕೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದ್ದರು. ಆದರೆ, ಕಳಪೆ ಪಡಿತರ ಪೂರೈಕೆಯೇ ಮುಂದುವರೆದಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.