ಕೊಳ್ಳೇಗಾಲ: ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ರೂ ಸುಖಾಸುಮ್ಮನೆ ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದವರಿಗೆ, ಅನಗತ್ಯವಾಗಿ ಮನೆಯಿಂದ ಹೊರ ಬಂದು ರಸ್ತೆ ಬದಿಗಳಲ್ಲಿ ನಿಂತು ಕಾಲ ಕಳೆಯುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೂ ಸಮಯ ನಿಗದಿಪಡಿಸಲಾಗಿದ್ದು, ಬಳಿಕ ಅನಗತ್ಯ ಓಡಾಟಕ್ಕೆ ಅವಕಾಶವಿರುವುದಿಲ್ಲ. ಆದರೆ, ಜನರು ಸುಮ್ಮನೆ ರಸ್ತೆಗಳಿದು ಬೈಕ್, ಕಾರುಗಳಲ್ಲಿ ಅಡ್ಡಾಡುವುದನ್ನು ಕಂಡ ಪೊಲೀಸರು ದಂಡದ ಬಿಸಿ ಮುಟ್ಟಿಸಿ ಜೊತೆಗೆ ಪುನಃ ಅಸಡ್ಡೆ ವರ್ತನೆ ಕಂಡರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಆಸ್ಪತ್ರೆಗಳು, ಮೆಡಿಕಲ್, ಪೆಟ್ರೋಲ್ ಬಂಕ್ಗಳು ಎಂದಿನಂತೆ ತೆರೆದಿದ್ದು, ತುರ್ತು ಸೇವೆ ಒದಗಿಸುತ್ತಿವೆ. ಕೆಲವರು ಚಿಕಿತ್ಸೆಗಾಗಿ ಆಸ್ಪತ್ರೆ, ಔಷಧಗಳನ್ನು ಪಡೆಯಲು ಮೆಡಿಕಲ್ಗಳತ್ತ ಧಾವಿಸಿದರೆ, ಇನ್ನೂ ಕೆಲವರು ಅನಗತ್ಯ ಸಂಚಾರಕ್ಕೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ಭಾನುವಾರ ಅಗತ್ಯ ವಸ್ತುಗಳ ಖರೀದಿಗೆ ಮೀಸಲಿಟ್ಟ ಸಮಯ ಮುಗಿಯುತ್ತಿದಂತೆ ರಸ್ತೆಗಿಳಿದ ಪೊಲೀಸರು ಪಟ್ಟಣ ಪ್ರದಕ್ಷಿಣೆ ಹಾಕಿದರು. ಮೈದಾನ, ರಸ್ತೆ ಬದಿ, ಅಂಗಡಿಗಳ ಮುಂದೆ ಕಾಲ ಕಳೆಯುತ್ತಿದ್ದವರ ಮೇಲೆ ದಾಳಿ ನಡೆಸಿ ಮಾಸ್ಕ್ ಯಾಕೆ ಹಾಕಿಲ್ಲ? ಏನು ಕೆಲಸಕ್ಕೆ ಹೊರಗೆ ಬಂದಿದ್ದೀರಿ ಎಂದು ಪ್ರಶ್ನಿಸಿದರು.
ಸುಮಾರು 20ಕ್ಕೂ ಹೆಚ್ಚು ಮಂದಿ ಮಾಸ್ಕ್ ಧರಿಸದಿರುವುದು, ಸುಖಾಸುಮ್ಮನೆ ಸುತ್ತಾಡುವವರಿಗೆ 100 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ನಿರಾಕರಿಸಿದವರ ಬೈಕ್ಗಳನ್ನು ಠಾಣೆಗೆ ಕೊಂಡೊಯ್ದಿದ್ದಾರೆ.