ಚಾಮರಾಜನಗರ: ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸಾಕಷ್ಟು ಜನ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಬಹಳ ಮಂದಿ ತಮ್ಮದೇ ಆದ ರೀತಿಯಲ್ಲಿ ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನು ಈ ಯುದ್ಧದಲ್ಲಿ ಪೊಲೀಸರು ಕೂಡಾ ವೈದ್ಯರಷ್ಟೇ ಶ್ರಮ ಪಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜನರನ್ನು ಮನೆಯಿಂದ ಹೊರ ಬಾರದಂತೆ ತಡೆಯುವುದೇ ಪೊಲೀಸರಿಗೆ ದೊಡ್ಡ ಟಾಸ್ಕ್ ಆಗಿದೆ.

ಈ ನಡುವೆ ಪೊಲೀಸ್ ಪೇದೆಯೊಬ್ಬರು ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣೆಯ ಮುಖ್ಯಪೇದೆ ಶಿವಮೂರ್ತಿ ಎಂಬುವವರು ಶಿವಪುರದಲ್ಲಿ ಕರ್ತವ್ಯಕ್ಕೆ ತೆರೆಳಿದ್ದ ವೇಳೆ ಮಾನಸಿಕ ಅಸ್ವಸ್ಥನೊಬ್ಬ ಅನ್ನ, ನೀರು ಇಲ್ಲದೆ ಕಷ್ಟಪಡುತ್ತಿದ್ದನ್ನು ನೋಡಿದ್ದಾರೆ. ಆತನ ಕಷ್ಟಕ್ಕೆ ಮರುಗಿದ ಪೇದೆ ಶಿವಮೂರ್ತಿ, ಸ್ಥಳಕ್ಕೆ ಕ್ಷೌರಿಕರೊಬ್ಬರನ್ನು ಕರೆಸಿ ಹೇರ್ ಕಟಿಂಗ್ ಮಾಡಿಸಿ, ಆತನಿಗೆ ಸ್ನಾನ ಮಾಡಿಸಿ ಗ್ರಾಮಸ್ಥರೊಬ್ಬರ ಸಹಾಯ ಪಡೆದು ಹೊಸ ಬಟ್ಟೆ ತಂದು ತೊಡಿಸಿರುವುದಲ್ಲದೆ, ಮೆಸ್ ಒಂದರಲ್ಲಿ ಊಟ ಕೂಡಾ ಕೊಡಿಸಿದ್ದಾರೆ. ಪೇದೆಯ ಈ ಕಾರ್ಯವನ್ನು ನೋಡಿದವರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.