ಚಾಮರಾಜನಗರ: ಜಿಲ್ಲೆಯ ಹಲವೆಡೆ ಮಳೆ ಬಂದರೂ ಚಾಮರಾಜನಗರದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ವರುಣ ದೇವನ ಕೃಪೆಗಾಗಿ ಇಂದು ಚಾಮರಾಜೇಶ್ವರ ದೇಗುಲದ ಮುಂಭಾಗ ಪರ್ಜನ್ಯ ಪೂಜೆ ನಡೆಸಲಾಯಿತು.
ಅರ್ಚಕ ಅನಂತಪ್ರಸಾದ್ ನೇತೃತ್ವದಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಲಿ ಎಂದು ಶಿವನಿಗೆ ರುದ್ರಾಭಿಷೇಕ, ಪರ್ಜನ್ಯ ಜಪ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಜಿ.ಪಂ ಸದಸ್ಯ ರಾಮಚಂದ್ರು ಮಾತನಾಡಿ, 3-4 ವರ್ಷಗಳಿಂದ ಜಿಲ್ಲೆಯ ಮಧ್ಯಭಾಗದಲ್ಲಿ ಮಳೆಯಾಗುತ್ತಿಲ್ಲ, ದೇವರನ್ನು ಪೂಜೆಯ ಮೂಲಕ ಸಂತೃಪ್ತಿಗೊಳಿಸಿ ಮಳೆಗಾಗಿ ಬೇಡಿದ್ದು, ಉತ್ತಮ ಮಳೆಯಾಗುವ ನಂಬಿಕೆ ಇದೆ ಎಂದರು.
ಮಳೆ ಕೈಕೊಟ್ಟಾಗ ನಾನು ಮತ್ತು ನನ್ನ ಸ್ನೇಹಿತರು ಒಡಗೂಡಿ ಪರ್ಜನ್ಯ ಪೂಜೆಯನ್ನು ಮಾಡಲಿದ್ದು, ಕಾಕತಾಳಿಯವೊ ಇಲ್ಲಾ ಪೂಜಾ ಫಲವೋ ತಿಳಿದಿಲ್ಲ ಗಂಗಾಧೇಶ್ವರನ ಕೃಪೆಯಂತೆ ಪ್ರತಿ ಬಾರಿ ಪರ್ಜನ್ಯ ಪೂಜೆ ಮಾಡಿದ ಒಂದು ವಾರದ ಒಳಗೆ ಮಳೆ ಬರುತ್ತದೆ ಎಂದು ಅರ್ಚಕ ಅನಂತಪ್ರಸಾದ್ ತಿಳಿಸಿದರು.