ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಹೀಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲೇ ಇರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಕೊರೊನಾ 2ನೇ ಅಲೆ ಹಾಗೂ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ದಿಢೀರ್ ನಗರಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿ, ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಕೊಡುವುದರ ಬಗ್ಗೆ ಸುದೀರ್ಘ ಚರ್ಚೆ, ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಮೊದಲನೇ ಅಲೆಯಲ್ಲಿ ಹಲವು ಕಾರ್ಯತಂತ್ರ ರೂಪಿಸಿ ಸೋಂಕು ಹರಡದಂತೆ ಗಮನಾರ್ಹ ಸಾಧನೆ ಮಾಡಿದ್ದೆವು. ಈಗ ಕೊರೊನಾ 2ನೇ ಇನ್ನಿಂಗ್ಸ್ ಎದುರಿಸಲು ಸಿದ್ಧವಾಗಬೇಕು. ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದ್ದು, ಹಣದ ಕೊರತೆಯಿಲ್ಲ ಎಂದು ಹೇಳಿದರು.
ಲಸಿಕೆ ಪಡೆಯಲು ಜನರು ಹಿಂಜರಿಯಬಾರದು. ವ್ಯಾಕ್ಸಿನ್ ತೆಗೆದುಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಕೊರೊನಾ ಹರಡದಂತೆ ಇರಲು ಒಂದೇ ಮಾರ್ಗವೆಂದರೆ ಅನಗತ್ಯ ಓಡಾಟ ನಿಲ್ಲಿಸುವುದು. ವಾಟ್ಸಪ್ ಬಳಸಿದಂತೆ ಎಸ್ಎಂಎಸ್ (ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ) ಕಾಪಾಡಬೇಕು. ಸರ್ಕಾರಿ ಕಚೇರಿಗಳಿಗೆ ಬರುವುದನ್ನು ಆದಷ್ಟು ಕಡಿಮೆ ಮಾಡಿ. ಮದುವೆಯಾಗುತ್ತಿರುವವರು ಆದಷ್ಟು ವಿವಾಹ ಕಾರ್ಯಕ್ರಮ ಮುಂದೂಡಿ. ಹನಿಮೂನ್ ಬದಲು ಐಸಿಯುಗೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಲಿ, ಆಮ್ಲಜನಕ ಕೊರತೆಯಾಗಲಿ ಇಲ್ಲ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಆ್ಯಕ್ಸಿಜನ್ ಪೂರೈಸಲು ಒಬ್ಬರು ಮುಂದೆ ಬಂದಿದ್ದಾರೆ. ಯಾರಿಗೆ ಹೋಂ ಐಸೋಲೇಷನ್ ಇರಲು ಸೌಕರ್ಯ ಇಲ್ಲವೋ ಅಂತಹವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.