ಚಾಮರಾಜನಗರ: ಇಂದಿನಿಂದ ಮೂರನೇ ಹಂತದ ಅನ್ಲಾಕ್ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಹಜ ಜೀವನದತ್ತ ಮರಳಿದ್ದು ಬೆಳಗ್ಗೆಯಿಂದ ಸಂಜೆವರೆಗೂ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದವು.
ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಬಂಡೀಪುರ ಸಫಾರಿ ಕೇಂದ್ರ ಹಾಗೂ ಭರಚುಕ್ಕಿ ಜಲಪಾತ ವೀಕ್ಷಣೆಗೂ ತಕ್ಕಮಟ್ಟಿಗೆ ಪ್ರವಾಸಿಗರು ಆಗಮಿಸಿದ್ದರು.
ಲಾಕ್ಡೌನ್ ವೇಳೆಯಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಜಿಲ್ಲೆಯ ಹೋಟೆಲ್ ಉದ್ಯಮ ಇಂದು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಎಲ್ಲಾ ಹೋಟೆಲ್ಗಳಲ್ಲಿ ಜನರು ಕಿಕ್ಕಿರಿದಿದ್ದರು. ಜೊತೆಗೆ ಸಾರಿಗೆ ಸಂಚಾರ ಸಹ ಸಾಮಾನ್ಯವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.