ಚಾಮರಾಜನಗರ : ಪಾರ್ಟಿ ಅನ್ನುವುದು ಸಮುದ್ರ ಇದ್ದಂತೆ. ಇಲ್ಲಿ ಎಲ್ಲರೂ ಬೇಕು, ನಮ್ಮ ಜೊತೆ ಬಂದರೆ ಜೊತೆಯಾಗಿ ಹೋಗುತ್ತೇವೆ ಬರದಿದ್ದವರನ್ನು ಬಿಟ್ಟು ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮೊದಲ ದಿನವಾದ ಬುಧವಾರ ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಮ್ಮ ಪಕ್ಷಕ್ಕೆ ಎಲ್ಲರೂ ಬೇಕು, ಒಂದ್ರೆ ಜೊತೆಯಾಗಿ ಹೋಗುತ್ತೇವೆ, ಬರಲಿಲ್ಲವೆಂದರೇ ಬಿಟ್ಟು ಹೋಗುತ್ತೇವೆ ಎಂದು ಕೊಳ್ಳೇಗಾಲದಲ್ಲಿ ಟಿಕೆಟ್ ಆಕಾಂಕ್ಷಿ ಜಿ.ಎನ್. ನಂಜುಂಡಸ್ವಾಮಿ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟರು.
ಇನ್ನು, ಸಂಸದ ವಿ. ಶ್ರೀನಿವಾಸಪ್ರಸಾದ್ ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿರುವುದರಿಂದ ಸಂಕಲ್ಪ ಯಾತ್ರೆಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಕೂಡ ಸಣ್ಣ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ ಎಂದು ಕರೆ ಮಾಡಿ ತಿಳಿಸಿದ್ದಾರೆ ಎಂದು ಸೋಮಣ್ಣ ಗೈರಾದದ್ದಕ್ಕೆ ಸ್ಪಷ್ಟನೆ ಕೊಟ್ಟರು.
ಚಾಮರಾಜನಗರ ಈ ಭಾಗದಲ್ಲಿ ಅತಿ ಹೆಚ್ಚು ರೈತರು ಅರಿಶಿಣ ಬೆಳೆಯುತ್ತಿದ್ದು, ಬೆಂಬಲ ಬೆಲೆ ಸಿಗದ ಅವರು ಕಂಗಾಲಾಗಿ ಹೋಗಿದ್ದಾರೆ. ಈ ವೇಳೆ ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಚಾಮರಾಜನಗರಕ್ಕೆ ಕರೆತಂದು ಅರಿಶಿಣ ಉತ್ಪನ್ನ ತಯಾರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
ನನಗೆ ನಾಯಕರ ಆಶೀರ್ವಾದ ಇದೆ : ಇದೇ ಸಂದರ್ಭದಲ್ಲಿ ಮಾತನಾಡಿದ ಕೊಳ್ಳೇಗಾಲ ಶಾಸಕ ಮಹೇಶ್ ಅವರು ನನಗೆ ಯಡಿಯೂರಪ್ಪ ಸೇರಿದಂತೆ ಇನ್ನಿತರ ನಾಯಕರು ಆಶೀರ್ವಾದ ಮಾಡಿದ್ದಾರೆ. ನನಗೆ ಟಿಕೆಟ್ ಫೈನಲ್ ಎನ್ನುವಂತೆ ಬಿಎಸ್ವೈ ಆಶೀರ್ವಾದ ಮಾಡಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ನಿಂದ ಟಿಕೆಟ್ ಘೋಷಣೆ ಆಗಬೇಕಿದೆ ಅಷ್ಟೇ ಎಂದು ಹೇಳಿದರು. ಹಾಗೂ ಕೊಳ್ಳೇಗಾಲದಲ್ಲಿ ಬಿಜೆಪಿ ಮತ್ತೆ ಗೆಲ್ಲಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಎದುರಾಳಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಯಾರು ಎಂಬ ಪ್ರಶ್ನೆ ಉತ್ತರಿಸದ ಶಾಸಕರು ಮುಂದೆ ಟಿಕೆಟ್ ಘೋಷಣೆ ಆಗಲಿ ನೋಡೋಣ ಎಂದರು. ಬಳಿಕ ತಮ್ಮ ಪೋಸ್ಟರ್ಗಳಿಗೆ ಸಗಣಿ ಎರೆಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡುವ ಪೋಸ್ಟ್ ಗಳ ಸಂಬಂಧ ಪ್ರತಿಕ್ರಿಯಿಸಿ ನೆಗೆಟಿವ್ ಫೋರ್ಸ್ಗಳನ್ನು ಎದುರಿಸಿಕೊಂಡೇ ನಾನು ಬಂದಿರುವುದು. ದ್ವೇಷದಿಂದ ಮಾತನಾಡುವವರು ಬಹಳ ಬೇಗ ಸುಸ್ತಾಗಿಬಿಡುತ್ತಾರೆ, ಇವೆಲ್ಲವನ್ನು ಆರೋಗ್ಯಕಾರಿಯಾಗಿ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಎರಡನೇ ದಿನದ ಯಾತ್ರೆ : ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಎರಡನೇ ದಿನ ಚಾಮರಾಜನಗರದಲ್ಲಿ ರೋಡ್ ಶೋ ಮೂಲಕ ಆರಂಭವಾಗಲಿದೆ. ಸಚಿವ ಈಶ್ವರಪ್ಪ, ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ. ಬಳಿಕ, ಗುಂಡ್ಲುಪೇಟೆಯಲ್ಲಿ ಬಹಿರಂಗ ಸಮಾವೇಶ ಜರುಗಲಿದೆ.
ಇದನ್ನೂ ಓದಿ :ಶಾಸಕ ಮಹೇಶ್ಗೆ ಕೊಳ್ಳೇಗಾಲದ ಟಿಕೆಟ್ - ಬಿಎಸ್ವೈ ಸುಳಿವು: ಸಚಿವ ಸೋಮಣ್ಣ, ಟಿಕೆಟ್ ಆಕಾಂಕ್ಷಿ ನಂಜುಂಡಸ್ವಾಮಿ ಗೈರು