ಚಾಮರಾಜನಗರ: ಗಾರೆ ಕೆಲಸಗಾರರು ತೆರಳುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಒಬ್ಬ ಮೃತಪಟ್ಟು 8 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ತಾಲೂಕಿನ ಉಗೇನದಹುಂಡಿ ಬಳಿ ನಡೆದಿದೆ. ಮೂಡಲ ಅಗ್ರಹಾರ ಗ್ರಾಮದ ಕೆಂಪರಾಜು (27) ಅಪಘಾತದಲ್ಲಿ ಮೃತಪಟ್ಟಿದ್ದು
ರಾಚಪ್ಪ, ಮಹೇಶ, ದರ್ಶನ್, ಮಂಟೇಲಿಂಗ, ಮಹದೇವಸ್ವಾಮಿ, ನಾಗರಾಜು, ಮಹದೇವ ಪ್ರಸಾದ್, ಕುಮಾರ್ ಎಂಬವರು ಗಾಯಗೊಂಡಿದ್ದಾರೆ.
ಮನೆಯೊಂದಕ್ಕೆ ತಾರಸಿ ಕೆಲಸ ಮಾಡಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಇತರೆ ಸುದ್ದಿಗಳು:- ಗಾಂಜಾ ಸಾಗಾಟ ಮಾಡುತ್ತಿದ್ದವನ ಬಂಧನ: ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ರಾಮಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಮಹೇಶ್ ಅಲಿಯಾಸ್ ರವಿ ಬಂಧಿತ ಆರೋಪಿ. ಭದ್ರಯ್ಯನಹಳ್ಳಿ ಗ್ರಾಮದ ಮಹೇಶ್ ಅಲಿಯಾಸ್ ರವಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 2.4 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೋರ್ವನ ಬಂಧನ: ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ. ಹನೂರು ತಾಲೂಕಿನ ಚಿತ್ತಾಪುರ ಗ್ರಾಮದ ಫರ್ದಿನ್ ಖಾನ್ (26) ಬಂಧಿತ ಆರೋಪಿ. ಚಿತ್ತಾಪುರ ಗ್ರಾಮದ ಫರ್ದಿನ್ ಖಾನ್ ಎಂಬುವವನು ಕೌದಳ್ಳಿ ಮಾರ್ಗವಾಗಿ ಹನೂರು ಪಟ್ಟಣದತ್ತ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಪಡೆದ ರಾಮಾಪುರ ಪೊಲೀಸರು ದಾಳಿ ನಡೆಸಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 1 ಕೆಜಿಯಷ್ಟು ಒಣಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಕಬಿನಿ ನಾಲೆಗೆ ಆಯತಪ್ಪಿ ಬಿದ್ದು ಕೊಚ್ಚಿ ಹೋದ ಬೈಕ್ ಸವಾರ: ಕಬಿನಿ ನಾಲೆಗೆ ಆಯತಪ್ಪಿ ಬಿದ್ದು ಬೈಕ್ ಸವಾರ ಕೊಚ್ಚಿ ಹೋಗಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಸಮೀಪದ ಕಬಿನಿ ನಾಲೆಯಲ್ಲಿ ನಡೆದಿದೆ. ಬಾಗಳಿ ಗ್ರಾಮದ ನಿಂಗರಾಜು (35) ಕೊಚ್ಚಿ ಹೋದ ಬೈಕ್ ಸವಾರ. ರಾಸುಗಳಿಗೆ ಮೇವು ಕಟ್ಟಿಕೊಂಡು ಏರಿ ಮೇಲೆ ಬರುತ್ತಿದ್ದಾಗ ಆಯತಪ್ಪಿ ಬೈಕ್ ಸಮೇತ ನಾಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಕುದೇರು ಠಾಣೆ ಪೊಲೀಸರು ಬೈಕ್ ಸವಾರರನ್ನು ಹುಡುಕಾಟದ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಂಧಿಸಲು ಹೋದಾಗ ಕಾನ್ಸ್ಟೇಬಲ್ ಕೈ ಕತ್ತರಿಸಿದ ದರೋಡೆಕೋರರು.. ಇಲ್ಲಿ ಪೊಲೀಸರಿಗೇ ಇಲ್ಲ ರಕ್ಷಣೆ!!