ಚಾಮರಾಜನಗರ: ಜಿಲ್ಲೆಯಲ್ಲಿ ವರದಿಯಾದ ಏಕಮಾತ್ರ ಸೋಂಕಿತ ವ್ಯಕ್ತಿ ಕುರಿತು ತಪ್ಪು ಮಾಹಿತಿ ನೀಡಿದ್ದ ಆತನ ಮಾವನಿಗೆ ಡಿಎಚ್ಒ ಡಾ.ರವಿಕುಮಾರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಸೋದರ ಮಾವನ ಮನೆಗೆ ತಾಯಿ ಬಿಡಲು ಬಂದಿದ್ದ ಮುಂಬೈ ಮೂಲದ ವೈದ್ಯಕೀಯ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆ ವೇಳೆ, ಆರೋಗ್ಯ ಇಲಾಖೆಗೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಪಾಲಿಮೇಡುವಿನಲ್ಲಿ ಸೋಂಕಿತ ಮತ್ತು ಸೋಂಕಿತನ ತಾಯಿ, ಸಹೋದರ ಇದ್ದರೆಂದು ಆರೋಗ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ.
ವಾಸ್ತವವಾಗಿ ಸೋಂಕಿತ ಮತ್ತು ಆತನ ತಾಯಿ, ಸಹೋದರನನ್ನು ಕೊಳ್ಳೇಗಾಲ ತಾಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ಮತ್ತು ಮಾವ ಹಾಗೂ ಆತನ ಪತ್ನಿ, ಮಕ್ಕಳು ಜಾಗೇರಿಯ ಕರಾಚಿಕಟ್ಟೆಯಲ್ಲಿ ಇದ್ದುದ್ದು ಬಳಿಕ ಖಚಿತವಾಗಿದ್ದರಿಂದ ಡಿಸಿ ಸೂಚನೆಯಂತೆ ಡಿಎಚ್ಒ ನೋಟಿಸ್ ನೀಡಿದ್ದಾರೆ.
ಮೂರು ದಿನದೊಳಗಾಗಿ ಸೂಕ್ತ ಸಮಜಾಯಿಷಿ ನೀಡುವಂತೆ ತಿಳಿಸಲಾಗಿದ್ದು, ತಪ್ಪಿದ್ದಲ್ಲಿ ಪ್ರಕೃತಿ ನಿರ್ವಹಣಾ ಕಾಯ್ದೆಯ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.