ಚಾಮರಾಜನಗರ: ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ನಮ್ಮದು. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲವೆಂದು ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಅಭ್ಯರ್ಥಿಯೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಕುರಿತು ಇತ್ತೀಚೆಗೆ ಹಗುರವಾಗಿ ಮಾತನಾಡಲಾಗುತ್ತಿದೆ. ಕೆಲವರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ, ತಾನು ಎಂದಿಗೂ ಅಂಬೇಡ್ಕರ್ರನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಓರ್ವ ಲಾಯರ್ ಆಗಿದ್ದವರು, ಆದ್ರೆ ತಲೆ ಇಲ್ಲದಂತೆ ಮಾತನಾಡುತ್ತಾರೆ. ಸಂವಿಧಾನ ಬದಲಿಸಲು ಪಠ್ಯ ಪುಸ್ತಕವಲ್ಲ, ಅಂಬೇಡ್ಕರ್ ಹಾಗೂ ಗಾಂಧಿ ಅವರನ್ನು ರಾಜಕೀಯವಾಗಿ ಯಾವ ಪಕ್ಷವೂ ತರಬಾರದು ಎಂದು ಅಭಿಪ್ರಾಯಪಟ್ಟರು. ನನ್ನ ಸಾಧನೆಗಳ ಮುಂದೆ ಸಂಸದ ಧ್ರುವ 1 ಪರ್ಸೆಂಟ್ ಕೂಡ ಮಾಡಿಲ್ಲ. ಜಿಲ್ಲೆಯಲ್ಲಿ ಮೋದಿ ಅಲೆ, ಬಿ ಎಸ್ವೈ ಸಂಘಟನೆ ಹಾಗೂ ನನ್ನ ಅನುಭವ ಎಲ್ಲವೂ ಕೆಲಸ ಮಾಡಲಿದ್ದು, ಬಿಜೆಪಿ ಟ್ರೆಂಡ್ ಇದೆ ಎಂದು ವಿಶ್ರೀ ಅಭಿಪ್ರಾಯಪಟ್ಟರು.
'ನನ್ನನ್ನು ಪಕ್ಷಾಂತರಿ, ತತ್ವಾಂತರಿ ಎಂದು ಕರೆದಿರುವ ಧ್ರುವನಾರಾಯಣಗೆ ಯೋಚನಾ ಶಕ್ತಿ ಎಷ್ಟಿದೆಯೋ ಗೊತ್ತಿಲ್ಲ. ನನಗೆ ನನ್ನದೇ ಆದ ವಿಚಾರಗಳಿದ್ದು, ನಾನೊಬ್ಬ ಸ್ವಾಭಿಮಾನಿ' ಎಂದು ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣಗೆ ಶ್ರೀನಿವಾಸಪ್ರಸಾದ್ ಟಾಂಗ್ ನೀಡಿದರು.
ದೋಸ್ತಿ ಸರ್ಕಾರ ನಗೆಪಾಟಲು:
ಇನ್ನು ರಾಜ್ಯದ ದೋಸ್ತಿ ಸರ್ಕಾರ ನಗೆಪಾಟಲಿನ ಸರ್ಕಾರವಾಗಿದೆ. ದೋಸ್ತಿ ವರ್ಸಸ್ ಬಿಜೆಪಿಯಾಗಬೇಕಿತ್ತು. ಆದ್ರೆ ಜೆಡಿಎಸ್ ವರ್ಸಸ್ ಕಾಂಗ್ರೆಸ್ಸಾಗಿದೆ. ಮೈತ್ರಿ ಕಾರಣದಿಂದ ಬಿಜೆಪಿಗೆ ಅನುಕೂಲವಾಗಿದೆ ಎಂದು ವಿ.ಶ್ರೀ ಹೇಳಿದರು. ಅವರಲ್ಲಿ ಹೊಂದಾಣಿಕೆ ಇಲ್ಲ, ಕಾಂಗ್ರೆಸ್ನ ಪ್ರಮೋದ್ ಮಧ್ವರಾಜ್ ಜೆಡಿಎಸ್ ಚಿಹ್ನೆಯಿಂದ ನಿಂತಿದ್ದಾರೆ. ಇನ್ನು, ಡಿಸಿಎಂ ಪರಮೇಶ್ವರ್ ನನ್ನ ಅರೋಗ್ಯದ ಬಗ್ಗೆ ಮಾತನಾಡಿದ್ದಾರೆ. ನನ್ನ ಕಾಲಿಗೆ ಬಿದ್ದು ಎಂಎಲ್ಸಿಯಾಗಿದ್ದ ಅವರಿಗೆ ಸ್ವಾಭಿಮಾನವೇ ಇಲ್ಲವೆಂದು ಕಿಡಿಕಾರಿದರು. ನಾನು ಜನರ ಒತ್ತಾಯಕ್ಕೆ, ಪ್ರೀತಿಗೆ ಕಟ್ಟುಬಿದ್ದು ಸ್ಪರ್ಧಿಸಿದ್ದೇನೆ. ಗೆಲ್ಲುವ ವಿಶ್ವಾಸ ಇದ್ದು ಜನರ ಪ್ರೀತಿ- ವಿಶ್ವಾಸ ಕಂಡು ನನ್ನ ರಾಜಕೀಯ ಜೀವನ ಸಾರ್ಥಕವಾಗಿದೆ ಎಂದು ಶ್ರೀನಿವಾಸಪ್ರಸಾದ್ ತಮ್ಮ ಸ್ಪರ್ಧೆ ಕುರಿತು ತಿಳಿಸಿದರು.