ಬೆಂಗಳೂರು : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಅಮ್ಲಜನಕ ಸಿಗದೆ ಸಾವನ್ನಪ್ಪಿದ ಕೋವಿಡ್ ಸೋಂಕಿತ ಮೃತರ ಕುಟುಂಬಗಳಿಗೆ ಪರಿಹಾರ ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಭರವಸೆ ನೀಡಿದೆ. ಆದರೆ, ಪರಿಹಾರದ ಮೊತ್ತ ಏಕರೂಪವಾಗಿಲ್ಲದ ಹಿನ್ನೆಲೆಯಲ್ಲಿ ಮೃತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡದಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲೆ ಪ್ರತಿಮಾ ಹೊನ್ನಾಪುರ ಅವರು ಮೆಮೋ ಸಲ್ಲಿಸಿ, ಡೆತ್ ಆಡಿಟ್ ರಿಪೋರ್ಟ್ ಆಧರಿಸಿ ಮೃತರ ಕುಟುಂಬಗಳಿಗೆ ಈಗಾಗಲೇ 2 ಲಕ್ಷ ಪರಿಹಾರ ನೀಡಿದೆ. ಹೈಕೋರ್ಟ್ ಸೂಚನೆಯಂತೆ ಇದೀಗ ಪರಿಹಾರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಚಿಕಿತ್ಸೆ ವೇಳೆ ಆಕ್ಸಿಜೆನ್ ಸಿಗದೆ ಸಾವನ್ನಪ್ಪಿದ 3 ವ್ಯಕ್ತಿಗಳ ಕುಟುಂಬಕ್ಕೆ ತಲಾ ₹5 ಲಕ್ಷ, ಚಿಕಿತ್ಸೆ ವೇಳೆ ಆಕ್ಸಿಜೆನ್ ಲಭ್ಯವಾದ ನಂತರ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ ₹4 ಲಕ್ಷ ನೀಡಲು ಸರ್ಕಾರ ತೀರ್ಮಾನಿಸಿದೆ.
ಇನ್ನು, ಆ್ಯಕ್ಸಿಜನ್ ಸಿಗದೆ ಮೇ 2ರ ರಾತ್ರಿ 10.30ಕ್ಕೂ ಮುನ್ನ ಸಾವನ್ನಪ್ಪಿದ 11 ಮಂದಿಗೂ ತಲಾ ₹2 ಲಕ್ಷದಂತೆ ಪರಿಹಾರ ನೀಡಲಾಗಿದೆ. ಆದರೆ, ಇವರು ಆ್ಯಕ್ಸಿಜನ್ ಸಿಗದೆ ಸಾವನ್ನಪ್ಪಿದರಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎ ಪಾಟೀಲ್ ಅವರ ಸಮಿತಿ ವರದಿಗಾಗಿ ಕಾಯುತ್ತಿದ್ದು, ವರದಿ ಸಿಕ್ಕ ನಂತರ ಸೂಕ್ತ ಪರಿಹಾರದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ವಾದ ಆಲಿಸಿದ ಪೀಠ, ಪರಿಹಾರ ನೀಡುವಲ್ಲಿ ತಾರತಮ್ಯ ಬೇಡ. ಮೊದಲಿಗೆ ಆಕ್ಸಿಜನ್ ಸಿಗದೆ ನಂತರ ಆಕ್ಸಿಜನ್ ನೀಡಿದ ನಂತರವೂ ಸಾವನ್ನಪ್ಪಿದವರಿಗೂ ₹5 ಲಕ್ಷದಂತೆಯೇ ಪರಿಹಾರ ನೀಡಬೇಕಿದೆ. ಚಿಕಿತ್ಸೆಯಲ್ಲಿನ ಲೋಪವನ್ನು ಸರ್ಕಾರ ಪರಿಗಣಿಸಬೇಕು. ಹೀಗಾಗಿ, 3 ಮೃತರ ಕುಟುಂಬಗಳಿಗೆ 5 ಲಕ್ಷ ನೀಡಿ ಉಳಿದ 10 ಮೃತರ ಕುಟುಂಬಗಳಿಗೆ ₹4 ಲಕ್ಷ ನೀಡುವುದು ಸರಿಯಾದ ಕ್ರಮವಲ್ಲ. ಸರ್ಕಾರ ಇದನ್ನು ಸರಿಪಡಿಸಬೇಕು ಎಂದು ಸೂಚಿಸಿತು.
ಇನ್ನು, ಮೇ 2ರ ರಾತ್ರಿ 10.30ರ ಮೊದಲು ಸಾವನ್ನಪ್ಪಿದ 10 ಮಂದಿಯ ಕುಟುಂಬಸ್ಥರಿಗೆ ನ್ಯಾಯಮೂರ್ತಿ ಸಮಿತಿ ವರದಿ ನಂತರ ನಿರ್ಧರಿಸುವ ಕುರಿತು ಸರ್ಕಾರ ನಿರ್ಧರಿಸಬಹುದು ಎಂದು ತಿಳಿಸಿ, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.