ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಆರ್ಭಟದಿಂದ ರಾಜ್ಯ ಸರ್ಕಾರ ಘೋಷಿಸಿರುವ ನೈಟ್ ಕರ್ಫ್ಯೂ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಿನ್ನೆ ರಾತ್ರಿಯಿಂದ ಜಾರಿಯಾಗಿದ್ದು, ಜನರಿಗೆ ತಿಳಿ ಹೇಳಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಸ್ತೆಗಿಳಿದರು.
ಡಿಸಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ದಿವ್ಯಾ ಸಾರಾ ಥಾಮಸ್ ನಗರ ಪ್ರದಕ್ಷಿಣೆ ನಡೆಸಿ 9 ಗಂಟೆ ಮೇಲೂ ಓಡಾಡುತ್ತಿದ್ದ ಜನರನ್ನು ಹಾಗೂ ತೆರೆದಿದ್ದ ಅಂಗಡಿ-ಮುಂಗಟ್ಟುಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಕೊರೊನಾ ಕಟ್ಟೆಚ್ಚರ, ನೈಟ್, ವಾರಾಂತ್ಯ ಕರ್ಫ್ಯೂ; ತಾಲ್ಲೂಕು ಆಡಳಿತದಿಂದ ಜಾಗೃತಿ
ನಿಷೇಧಾಜ್ಞೆ ಎಂದರೆ ನಿಷೇಧಾಜ್ಞೆ ಅಷ್ಟೇ. ಅನಗತ್ಯವಾಗಿ ಯಾರೂ ಓಡಾಡಬಾರದು ಹಾಗೂ ಅಗತ್ಯ ವಸ್ತುಗಳ ಅಂಗಡಿಗಳನ್ನು ಬಿಟ್ಟು ಎಲ್ಲಾ 9ರ ಬಳಿಕ ಮುಚ್ಚಬೇಕು. ಹೋಟೆಲ್‌ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ ಎಂದು ಖಡಕ್ ಆಗಿ ಸೂಚಿಸಿದರು.
ಜೋಡಿ ರಸ್ತೆಯಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಬುದ್ಧಿ ಹೇಳಿದ ಡಿವೈಎಸ್ಪಿ, ಇಂದಿನಿಂದ ಅನಗತ್ಯವಾಗಿ ಓಡಾಡಿದರೇ ಬೈಕ್ ಜಪ್ತಿ ಮಾಡಿ ಕೇಸ್ ಹಾಕಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು ಇಲ್ಲದಿದ್ದರೇ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. ನಗರಸಭೆ ಆಯುಕ್ತರು, ಆರೋಗ್ಯ ನಿರೀಕ್ಷಕ, ಪೊಲೀಸರು ಇದ್ದರು.
ಕೊಳ್ಳೇಗಾಲದಲ್ಲಿ ಪರೇಡ್ ಮೂಲಕ ಜಾಗೃತಿ:
ಕೊಳ್ಳೇಗಾಲದಲ್ಲೂ ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಕಠಿಣವಾಗಿ ಜಾರಿಗೊಳಿಸಲು ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಲಾಗಿದ್ದು, ಪಟ್ಟಣದಲ್ಲಿ ಪರೇಡ್ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ತಾಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪಟ್ಟಣದಾದ್ಯಂತ ಪರೇಡ್ ನಡೆಯಿತು. ನಗರಸಭೆ ಕಸ ವಿಲೇವಾರಿ ವಾಹನ ಹಾಗೂ ಆಟೋಗಳಿಗೆ ಮೈಕ್ ಅಳವಡಿಸಿ ಆದೇಶದ ಸೂಚನೆಗಳನ್ನು ಸಾರಲಾಯಿತು.
ಈ ವೇಳೆ ತಹಶೀಲ್ದಾರ್ ಕುನಾಲ್ ಮಾತನಾಡಿ, ಸರ್ಕಾರದ ಆದೇಶದಂತೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಇಂದಿನಿಂದ ಜಾರಿಯಲ್ಲಿದೆ. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ರಾತ್ರಿ 9 ಗಂಟೆಯಿಂದ 6 ಗಂಟೆಯವರೆಗೆ ಅನಾವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಬೇಕು. ಗುಂಪುಗೂಡಿ ಓಡಾಡಬಾರದು. ವರ್ತಕರು ಸ್ವಯಂ ಪ್ರೇರಿತವಾಗಿ ರಾತ್ರಿ 9 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು. ಕೊರೊನಾ ತಡೆಗಟ್ಟಲು ನಮ್ಮೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ವೃತ್ತ ನಿರೀಕ್ಷಕ ಶಿವರಾಜ್ ಬಿ. ಮುಧೋಳ್ ಇತರ ಸಿಬ್ಬಂದಿ ಇದ್ದರು.