ಚಾಮರಾಜನಗರ: ರಾಜ್ಯದಲ್ಲಿ ಶೀಘ್ರವಾಗಿ ಹೊಸ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಮರಳಿನ ಸಮಸ್ಯೆಯ ಪರಿಹಾರಕ್ಕಾಗಿ ಹೊಸ ನೀತಿಯೊಂದನ್ನು ಸಿದ್ಧಪಡಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. 6 ಹಂತಗಳಲ್ಲಿ ಶ್ರೇಣಿಕೃತವಾಗಿ ಮರಳು ಬಳಸುವ ಅವಕಾಶ ಹೊಸ ನೀತಿಯಲ್ಲಿರಲಿದೆ ಎಂದು ಅವರು ಮಾಹಿತಿ ನೀಡಿದರು.
ಹಳ್ಳ, ತೊರೆ, ಹೊಳೆ ಇತ್ಯಾದಿಯಿಂದ ಸಂಗ್ರಹಿಸುವ ಮರಳನ್ನು 1-3 ನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾರಾಟ ಮಾಡಲು ಅನುವು ನೀಡಲಾಗುವುದು. ಜನರು ತಮ್ಮ ಬಳಕೆಗಾಗಿ ಇದನ್ನು ಖರೀದಿಸಬಹುದು. ಒಂದು ಟನ್ ಮರಳು ₹300ರಿಂದ ₹350ಗೆ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ. 4-6ನೇ ಶ್ರೇಣಿಯಲ್ಲಿ ಮೈಸೂರು ಮಿನರಲ್ಸ್ ಮತ್ತು ಹಟ್ಟಿ ಚಿನ್ನದ ಗಣಿಯ ಮೂಲಕ ಮಾರಾಟ ಮಾಡಲು ಅವಕಾಶ ಇರಲಿದೆ ಎಂದು ವಿವರಿಸಿದರು.