ಚಾಮರಾಜನಗರ: ಗಾಂಧಿ ಹಂತಕ, ಅಖಂಡ ಭಾರತ ಪ್ರತಿಪಾದಕ ನಾಥೂರಾಂ ಗೋಡ್ಸೆಯ 110ನೇ ಜಯಂತಿಯನ್ನು ಇಂದು ಅಜಾದ್ ಹಿಂದೂ ಸೇನೆ ಆಚರಿಸಿದೆ.
ನಗರದ ಸಂತೇಮರಹಳ್ಳಿ ವೃತ್ತದಲ್ಲಿನ ಅಜಾದ್ ಹಿಂದೂ ಸೇನೆಯ ಕಚೇರಿಯಲ್ಲಿ ಗೋಡ್ಸೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಘಟನೆ ಕಾರ್ಯಕರ್ತರು ನಮಿಸಿದರು. ಬಳಿಕ, ಅಧ್ಯಕ್ಷ ಎಂ.ಎಸ್.ಪೃಥ್ವಿರಾಜ್ ಮಾತನಾಡಿ, ನಾಥೂರಾಮ್ ಗೋಡ್ಸೆ ಅವರು ತಮ್ಮ ಜೀವನದ್ದುಕ್ಕೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಹಿಂದುತ್ವವನ್ನು ಪ್ರತಿಪಾದಿಸಿಕೊಂಡು ಬಂದಿದ್ದರು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿ ದೇಶ ವಿಭಜನೆಯನ್ನು ಪ್ರಬಲವಾಗಿ ಖಂಡಿಸಿದ್ದರು. ಮಹಾತ್ಮ ಗಾಂಧಿ ಅವರ ಹಂತಕ ಎಂಬುದನ್ನು ಮಾತ್ರ ಪ್ರಚಾರಪಡಿಸಿ ಅವರೊಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಲಾಗಿದೆ ಎಂದರು.
ಸಿಂಧೂನದಿಯು ಭಾರತ ದೇಶಕ್ಕೆ ಸೇರಿದಾಗ ಮಾತ್ರ ತನ್ನ ಅಸ್ತಿಯನ್ನು ನದಿಯಲ್ಲಿ ವಿಸರ್ಜಿಸಬೇಕೆಂದು ಬಯಸಿದ್ದರು. ತಮ್ಮ ಸಾವಿನಲ್ಲೂ ಅಖಂಡ ಭಾರತ ನಿರ್ಮಾಣದ ಕಲ್ಪನೆಯನ್ನು ಹೊತ್ತು ಪ್ರಾಣ ತ್ಯಾಗ ಮಾಡಿದರು. ಇವರ ದೇಶಭಕ್ತಿ ಪ್ರಖರ ಹಿಂದುತ್ವ ಪ್ರತಿಪಾದನೆ ಪ್ರತಿಯೊಬ್ಬ ಭಾರತೀಯನು ಮೈಗೂಡಿಸಿಕೊಳ್ಳಬೇಕು ಎಂಬ ಆಶಯ ಹೊರಹಾಕಿದರು.