ಚಾಮರಾಜನಗರ : ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದ ಕೊರೊನಾ ಸೋಂಕಿತರೊಬ್ಬರ ಹೆಸರೇ ಪರಿಹಾರ ಪಟ್ಟಿಯಲ್ಲಿ ನಾಪತ್ತೆಯಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಸಿದ್ದನಾಯ್ಕ ಎಂಬುವರಿಗೆ ಏಪ್ರಿಲ್ 26ರಂದು ಕೊರೊನಾ ದೃಢಪಟ್ಟಿತ್ತು. ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 2ರಂದು ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದರು.
ಆದರೆ, ಸರ್ಕಾರ ಸಿದ್ದನಾಯ್ಕ ಹೆಸರನ್ನು ಕೈಬಿಟ್ಟು ಕೇವಲ 24 ಮಂದಿಗಷ್ಟೇ ಪರಿಹಾರ ಕೊಟ್ಟಿದೆ ಎಂದು ಮೃತರ ಪತ್ನಿ ಅಳಲು ತೋಡಿಕೊಂಡಿದ್ದಾರೆ.
ನನ್ನ ಪತಿ ಆಟೋ ಓಡಿಸಿ ಜೀವನ ನಡೆಸುತ್ತಿದ್ದರು. ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 2ರಂದು ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರು. ಮೃತಪಟ್ಟವರ ಪಟ್ಟಿಯಲ್ಲಿ ಜಿಲ್ಲಾಡಳಿತ ನನ್ನ ಪತಿಯ ಹೆಸರನ್ನು ಕೈಬಿಟ್ಟು ಅನ್ಯಾಯ ಎಸಗುತ್ತಿದೆ.
ಇತ್ತ ಪತಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ. ನನ್ನ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಸರ್ಕಾರ ನಮಗೆ ನೆರವು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.